ಮುಖಪುಟ /ಸಾಧಕರು

ಭಾರತೀಯ ಸಾಹಿತ್ಯ ಕ್ಷೇತ್ರದ ಪರಮೋಚ್ಚ ಪುರಸ್ಕಾರ ಜ್ಞಾನಪೀಠ
ಬಹುಭಾಷೀಯರ ಹಿಂದಿಗಿಂತಲೂ ಮಿಗಿಲಾಗಿ ಕನ್ನಡವು ೭ ಜ್ಞಾನಪೀಠ ಪ್ರಶಸ್ತಿ ಗಳಿಸಿದೆ. ಜ್ಞಾನಪೀಠ ಹಾಗೆಂದರೇನು
?

* ಟಿ.ಎಂ.ಸತೀಶ್

ಕನ್ನಡ ನಾಡು ನುಡಿ ಪರಂಪರೆಗೆ ೨೦೦೦ ವರ್ಷಗಳ ಇತಿಹಾಸವಿದೆ. ಬಹುಭಾಷೀಯರ ಹಿಂದಿಗಿಂತಲೂ ಮಿಗಿಲಾಗಿ ೭ ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಏಕೈಕ ಪ್ರಾದೇಶಿಕ ಭಾಷೆ ಕನ್ನಡ. ಇಂತಹ ಸರಳ, ಸುಂದರ ಭಾಷೆಯ ಸಾಹಿತ್ಯ ಹಿರಿಮೆಯೇ ಅಂತದ್ದು. ಕನ್ನಡ ಸಾರಸ್ವತ ಲೋಕದ ದಿಗ್ಗಜರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಕನ್ನಡ ಸಾಹಿತ್ಯ ಸರಸ್ವತಿಗೆ ಮೊದಲ ಜ್ಞಾನಪೀಠದ ಮಕುಟ ತೊಡಿಸಿದ ಅಧ್ವರ್ಯು.

ನಂತರ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಕೋಟ ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಯು.ಆರ್. ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ್ ಅವರು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಕನ್ನಡ ಸಾಹಿತ್ಯದ ಹಿರಿಮೆಯನ್ನು ದೇಶಾದ್ಯಂತ ಪಸರಿಸಿದರು.

 ಜ್ಞಾನಪೀಠ: ಜ್ಞಾನಪೀಠ ಪ್ರಶಸ್ತಿ ಭಾರತೀಯ ಸಾರಸ್ವತ ಲೋಕದಲ್ಲಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿ. ಸಾಹಿತ್ಯ ಲೋಕಕ್ಕೆ ಅನುಪಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪುರಸ್ಕರಿಸಲೋಸುಗವೇ ಈ ಪ್ರಶಸ್ತಿ ಜನ್ಮ ತಳೆದದ್ದು. ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸರಕಾರ ನೀಡುವ ಅತ್ಯುನ್ನತ ಸಾಹಿತ್ಯಕ ಪ್ರಶಸ್ತಿ ಎಂದು ತಿಳಿದವರೇ ಹೆಚ್ಚು. 

ಆದರೆ, ಜ್ಞಾನಪೀಠ ಸರಕಾರ ಕೊಡಮಾಡುವ ಪುರಸ್ಕಾರವಲ್ಲ. ಇದೊಂದು ಅತ್ಯುನ್ನತ ಖಾಸಗಿ ಪ್ರಶಸ್ತಿ ಎಂಬುದು ಹಲವರಿಗೆ ತಿಳಿದಿಲ್ಲ. ಈ ಪ್ರಶಸ್ತಿ ನೀಡುವ ಸಂಸ್ಥೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪ್ರತಿಷ್ಠಾನ ಈ ಪ್ರತಿಷ್ಠಾನವು ಪ್ರತಿವರ್ಷ ಒಬ್ಬ ಭಾರತೀಯ ಲೇಖಕ ಅಥವಾ ಸಾಹಿತಿ ಇಲ್ಲವೇ ಕವಿಯನ್ನು ಗುರುತಿಸಿ, ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿ ಪುರಸ್ಕರಿಸುತ್ತಾ ಬಂದಿದೆ.

 ಈ ಪ್ರಶಸ್ತಿ ಸುಲಭವಾಗಿ ಸಿಗುವ ಪ್ರಶಸ್ತಿ ಖಂಡಿತಾ ಅಲ್ಲ. ಆ ಪ್ರಶಸ್ತಿಗೆ ಪಾತ್ರರಾಗಲು ಕವಿ, ಸಾಹಿತಿ ತಮ್ಮ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರಬೇಕು. ಈ ಸಂಸ್ಥೆಯು, ಸಂವಿಧಾನದ ರೀತ್ಯ ಮಾನ್ಯ ಮಾಡಲ್ಪಟ್ಟ ರಾಷ್ಟ್ರೀಕೃತ ಭಾಷೆಗಳಲ್ಲಿ ರಚಿತವಾಗುವ ಕೃತಿ ಹಾಗೂ ಅದನ್ನು ರಚಿಸಿದ ಕೃತಿಕಾರನ ಸಾಧನೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ.

 ಸಾಹಿತ್ಯ ಕ್ಷೇತ್ರದ ಈ ಅತ್ಯುನ್ನತ ಪ್ರಶಸ್ತಿ ನೀಡುವ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪ್ರತಿಷ್ಠಾನ ಸ್ಥಾಪನೆ ಆದದ್ದು ೧೯೪೪ರಲ್ಲಿ. ರಮಾಜೈನ್ ಮತ್ತು ಸಾಹು ಶಾಂತಿ ಪ್ರಸಾದ್ ಜೈನ್ ದಂಪತಿಗಳು ಹುಟ್ಟು ಹಾಕಿದ ಈ ಸಂಸ್ಥೆ ೧೯೬೫ರಿಂದ ಭಾರತೀಯ ಭಾಷೆಗಳಲ್ಲಿ ಅನುಪಮ ಸಾಹಿತ್ಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸುತ್ತಾ ಬಂದಿದೆ.

 ನಿಯಮ: ಈ ಪ್ರಶಸ್ತಿ ಪಡೆಯುವ ಸಾಹಿತಿ, ಕವಿ, ಲೇಖಕರು ಭಾರತೀಯರಾಗಿದ್ದಲ್ಲಿ ಮಾತ್ರ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಒಂದು ಬಾರಿ ಪ್ರಶಸ್ತಿ ಪಡೆದ ಭಾಷೆಯನ್ನು ಮತ್ತೆ ಮುಂದಿನ ಮೂರು ವರ್ಷಗಳಿಗೆ ಪರಿಗಣಿಸಲಾಗುವುದಿಲ್ಲ. ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗುವುದಿಲ್ಲ. ಪ್ರಶಸ್ತಿ ಪಡೆದ ಕವಿ ಪ್ರಶಸ್ತಿಗೆ ಸೂಚಿಸುವ ಅವಧಿಯಲ್ಲಿ ಬದುಕಿರಬೇಕು. ಒಮ್ಮೆ ಪ್ರಶಸ್ತಿ ಪಡೆದ ಲೇಖಕನಿಗೆ ಮತ್ತೆ ಈ ಪ್ರಶಸ್ತಿ ನೀಡಲಾಗುವುದಿಲ್ಲ. ಜ್ಞಾನಪೀಠ ಪ್ರಶಸ್ತಿಯು ವಾಗ್ದೇವಿಯ ಪ್ರತಿಮೆ ಹಾಗೂ ಐದು ಲಕ್ಷ ರುಪಾಯಿ ಬಹುಮಾನವನ್ನು ಒಳಗೊಂಡಿದೆ.

ಮುಖಪುಟ /ಸಾಧಕರು