ಮುಖಪುಟ /ಸಾಧಕರು 

ಸಮುದ್ರಗೀತೆಗಳ ಅಲೆಯಲ್ಲಿ ಭಾರತ ಸಿಂಧು ರಶ್ಮಿಯಾಗಿ ಕಂಗೊಳಿಸಿದ ಗೋಕಾಕ್
ನವೋದಯದ ನಂತರ ಬದಲಾಗಬೇಕಾಗಿದ್ದ ಕಾವ್ಯಕ್ಕೆ ಅಗತ್ಯವಾದ ಛಂದೋರೂಪವನ್ನು
ನವ್ಯಕಾವ್ಯ ಪರಿಕಲ್ಪನೆಯನ್ನೂ ಹಾಗೂ ನವ್ಯತೆಯ ಕುರಿತ ಮಂತ ಚಿಂತನೆಗಳನ್ನು ನೀಡಿದ ಗೋಕಾಕರ ಸಾಹಿತ್ಯ ಸಾಧನೆ ಅತ್ಯಮೋಘ..

* ಟಿ.ಎಂ.ಸತೀಶ್

ವಿನಾಯಕ ಕೃಷ್ಣ ಗೋಕಾಕ್ ಅರ್ಥಾತ್ ವಿ.ಕೃ. ಗೋಕಾಕ್ ಸಮಸ್ತ ಕನ್ನಡ ಕೋಟಿಗೆ ಪರಿಚಯವಾದದ್ದು, ಗೋಕಾಕ್ ಚಳವಳಿಯ ಕಾಲದಲ್ಲಿ. ೧೯೮೨ರಲ್ಲಿ ಡಾ. ರಾಜ್‌ಕುಮಾರ್ ಆದಿಯಾಗಿ ರಾಜ್ಯದ ಸಾಹಿತಿ, ಕಲಾವಿದರು ಗೋಕಾಕ್ ವರದಿ ಜಾರಿಗೆ ಆಗ್ರಹಿಸಿ ನಡೆಸಿದ ಚಳವಳಿಯ ಸಂದರ್ಭದಲ್ಲಿ ಸಾಹಿತ್ಯದ ಗಂಧ-ಗಾಳಿ- ಆಸಕ್ತಿ ಇಲ್ಲದವರಿಗೂ ಗೋಕಾಕರ ಪರಿಚಯವಾಯ್ತು.

ಈ ಚಳವಳಿ ಗೋಕಾಕರಿಗೆ ಖ್ಯಾತಿ- ಜನಪ್ರಿಯತೆಯನ್ನು ತಂದಿತ್ತಿತು. ಚಳವಳಿಯ ನಂತರ ಯಾರೀ ಗೋಕಾಕ್ ಎಂಬ ಕುತೂಹಲದಿಂದ ಗೋಕಾಕರ ಸಾಹಿತ್ಯ ಓದಿದ ಕನ್ನಡಿಗರಿಗೆ ಕಡಿಮೆ ಏನಿಲ್ಲ. ಭಾರತಸಿಂಧುರಶ್ಮಿ ಸೇರಿದಂತೆ ಅವರ ಸಮಗ್ರ ಸಾಹಿತ್ಯ ಕೃಷಿಗೆ ೧೯೯೦ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂತು.

ಸಾಹಿತ್ಯವನ್ನು ಒಂದು ಕಾಯಕದಂತೆ ಅನವರತ - ಅವಿರತವಾಗಿ ನಡೆಸಿಕೊಂಡು ಬಂದ ಗೋಕಾಕರ ಸಾಹಿತ್ಯ ನಿರ್ಮಿತಿಯ ಹರಹು ವಿಶಾಲವಾದದ್ದು. ಅವರ ಸಾಹಿತ್ಯದ ಆಳ-ಅಗಲ ಶ್ರದ್ಧೆಯಿಂದ ಮನವಿಟ್ಟು ಕೃತಿಗಳನ್ನು ಓದಿದವರಿಗಷ್ಟೇ ನಿಲುಕೀತು.

ಗೋಕಾಕರಿಗೆ ೧೯೯೦ರಲ್ಲಿ ಜ್ಞಾನಪೀಠ ದೊರೆತಾಗ ಹಲವರು ಹುಬ್ಬೇರಿಸಿದರು. ಈಗಿನ ಪ್ರಶಸ್ತಿಗಳಾವುವೂ ಕೊಡುವುದಲ್ಲ - ತೆಗೆದಕೊಳ್ಳುವುದು ಎಂದು ಛೇಡಿಸಿದರು. ಗೋಕಾಕರಿಗೆ ಪ್ರಶಸ್ತಿ ಬಂದ ಬಗ್ಗೆ ಮೂಗು ಮುರಿದರು. ಆದರೆ, ನವೋದಯದ ನಂತರ ಬದಲಾಗಬೇಕಾಗಿದ್ದ ಕಾವ್ಯಕ್ಕೆ ಅಗತ್ಯವಾದ ಛಂದೋರೂಪವನ್ನು ನವ್ಯಕಾವ್ಯ ಪರಿಕಲ್ಪನೆಯನ್ನೂ ಹಾಗೂ ನವ್ಯತೆಯ ಕುರಿತ ಮಂತ ಚಿಂತನೆಗಳನ್ನು ನೀಡಿದ ಗೋಕಾಕರ ಸಾಹಿತ್ಯ ಸಾಧನೆ ಅತ್ಯಮೋಘವಾದ್ದು.

೧೯೪೦ರಲ್ಲಿ ಪ್ರಕಟವಾದ ಗೋಕಾಕರ ಸಮುದ್ರಗೀತೆಗಳು ಹಲವು ಹೊಸ ಅಂಶಗಳನ್ನು ಹೊರಗೆಡಹುತ್ತವೆ. ವಚನ ಸಾಹಿತ್ಯದ ಪ್ರೇರಣೆಯಿಂದ ಸಮುದ್ರಗೀತೆಗಳ ಅಭಿವ್ಯಕ್ತಿಯನ್ನು ರೂಪಿಸಿಕೊಂಡ ಗೋಕಾಕರು, ಹಿಂದಿನ ಚಂಪೂಕಾವ್ಯದ ತಂತ್ರವನ್ನು ಹೊಸಗನ್ನಡ ಕವಿತೆಗೆ ಅಳವಡಿಸಲು ಪ್ರಯತ್ನಿಸಿದವರು. ೧೯೪೫ರಲ್ಲಿ ಪ್ರಕಟವಾದ ತ್ರಿವಿಕ್ರಮನ ಆಕಾಶಗಂಗೆ ಹಾಗೂ ೬೫ರಲ್ಲಿ ಪ್ರಕಟವಾದ ಇಂದಲ್ಲ ನಾಳೆ ಕೃತಿಗಳು ಹೊಸ ಬಗೆಯ ಚಂಪೂಕಾವ್ಯಗಳೆಂದೇ ಗುರುತಿಸಲ್ಪಟ್ಟಿವೆ.

ಕವಿ ರತ್ನಾಕರ ವರ್ಣಿ ಅವರ ತರುವಾಯ ಕಡಲಿನ ಬಗ್ಗೆ, ಕಡಲಿನ ಅಸಂಖ್ಯ ವೈವಿಧ್ಯಗಳ ಕುರಿತು ಉತ್ಸಾಹ ತನ್ಮಯತೆಯಿಂದ ಬರೆದವರು ಬಹುಶಃ ಗೋಕಾಕರೊಬ್ಬರೇ. ಆಧುನಿಕ ಕಾವ್ಯಕ್ಕೆ ಶೈಶವಾವಸ್ಥೆಯಲ್ಲಿ ಚೈತನ್ಯ ನೀಡಿ ಮುನ್ನಡೆಸಿ, ನಮ್ಮ ಸಂಸ್ಕೃತಿಯೊಳಗೆ ಬೀಸಿದ ಆಧುನಿಕ ವಾತಾವರಣವನ್ನು ಮನಮುಟ್ಟುವಂತೆ ತಮ್ಮ ಕೃತಿಗಳಲ್ಲಿ ವರ್ಣಿಸಿದ ಗೋಕಾಕರ ಸೃಜನಶೀಲತೆ ಅನನ್ಯವಾದ್ದು.

ಗೋಕಾಕರ ಕಾವ್ಯಗಳಲ್ಲಿನ ವೈವಿಧ್ಯತೆ, ಸೌಂದರ್ಯ, ಶೈಲಿಯೇ ಅಂಥದ್ದು. ಈ ಕೆಳಗಿನ ಸಾಲುಗಳೇ ಅದಕ್ಕೆ ಸಾಕ್ಷಿ...

ಭಾರತದಲ್ಲಿ ಜನಸಂಖ್ಯೆ ಬೆಳೆವುದೆಂದು
ಚಿಂತಿಸುವೆವು ನಾವು
ಅಮೆರಿಕೆಯಲಿ ಯಂತ್ರ ಸಂಖ್ಯೆ ಮಿಕ್ಕಿ
ಹೊಸ ಮಾದರಿ ನೋವು
ಚಂದ್ರನ ಶೀತನ ಸ್ಪರ್ಶದಲಿ
ಸೂರ್ಯನ ರಜಸೋತ್ವವ ಹರ್ಷದಲಿ
ಗಗನ ವಿಹಾರಿ
, ತ್ರಿಭುವನ ಸಂಚಾರಿ
ನೀಲಾಂತರ್ಯಾಮಿ
, ವಿಶ್ವಪ್ರೇಮಿ
ಏಕಾಕಿ -ಆದರೂ ವಿವೇಕಿ!
ಅದುವೇ ನೀರದ
, ಅದುವೇ ನಾರದ.

ಗೋಕಾಕರು ಹುಟ್ಟಿದ್ದು ೧೯೦೯ ಆಗಸ್ಟ್ ೯ರಂದು. ಹುಟ್ಟೂರು ಧಾರವಾಡ ಜಿಲ್ಲೆಯ ಸವಣೂರು. ಭಾರತ ಸಿಂಧು ರಶ್ಮಿ ಎಂಬ ಮಹಾಕಾವ್ಯ, ಸಮುದ್ರಗೀತೆಗಳು, ಊರ್ಣನಾಭ, ಉಗಮ, ಬಾಳ ದೇಗುಲದಲ್ಲಿ, ದ್ಯಾವಾಪೃಥಿವಿ (ಖಂಡಕಾವ್ಯ) ಹಾಗೂ ಅಭ್ಯದಯ ಎಂಬ ೬ ಕವನ ಸಂಕಲನ, ಜನನಾಯಕ, ಯುಗಾಂತರ, ವಿಮರ್ಶಕ ವೈದ್ಯ ಎಂಬ ಮೂರು ನಾಟಕ, ಇಂದಿನ ಕನ್ನಡ ಕಾವ್ಯದ ಗೊತ್ತುಗುರಿ ಮೊದಲಾದ ೪ ವಿಮರ್ಶಾ ಗ್ರಂಥ, ೨ ಪ್ರಬಂಧ, ೨ ಪ್ರವಾಸ ಸಾಹಿತ್ಯ, ಒಂದು ಬೃಹತ್ ಕಾದಂಬರಿ ಬರೆದಿರುವ ಗೋಕಾಕರ ಪ್ರಥಮ ಕಾದಂಬರಿ ಇಜ್ಜೋಡು ಮುಂದೆ ಇದು ವಿಸ್ತೃತ ಗೊಂಡಾಗ ಸಮರಸವೇ ಜೀವನ ಎಂಬ ಬೃಹತ್ ಕಾದಂಬರಿಯಾಯ್ತು.

ಪ್ರಶಸ್ತಿ ಹಾರ: ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಶೈಲಿಯಲ್ಲಿ ಹಲವು ಉಪಯುಕ್ತ ಕೊಡುಗೆ ನೀಡಿದ ಗೋಕಾಕರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಎರಡು ಗೌರವ ಡಾಕ್ಟರೇಟ್, ಪದ್ಮಶ್ರೀ ಪುರಸ್ಕಾರ, ರಾಜಾಜಿ ಸಾಹಿತ್ಯ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗಾದಿಯನ್ನೂ ಗೋಕಾಕರು ಅಲಂಕರಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ (೧೯೬೬) ಕಾಲೇಜು ಶಿಕ್ಷಣದಲ್ಲಿ ಅನೇಕ ಬದಲಾವಣೆಗಳನ್ನು ತಂದು ಯಶಸ್ವೀ ಕುಲಪತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದವರು. ಗೋಕಾಕರು ಮರಣವನ್ನಪ್ಪಿದ್ದು ೨೮-೦೪-೧೯೯೨ರಲ್ಲಿ

ಮುಖಪುಟ /ಸಾಧಕರು