ಮುಖಪುಟ /ಸಾಧಕರು

ಸಾಧನಕೇರಿಯ ಅನರ್ಘ್ಯ ರತ್ನ ಅಂಬಿಕಾತನಯ ದತ್ತ
ಬೇಂದ್ರೆಯವರ ಕವಿತೆ ಒಂದು ಚಿಲುಮೆ, ಅದು ನೋಡಲು ಚಿಕ್ಕದು ಆದರೆ, ತೋಡಿದಷ್ಟೂ ಅರ್ಥ ಉಕ್ಕಿ ಹರಿಯುತ್ತದೆ - ತೀ.ನಂ.ಶ್ರೀ.

* ಟಿ.ಎಂ.ಸತೀಶ್

ಏನು ಏನು ಜೇನು ಜೇನು ಏನೇ ಗುಂಗು ಗಾನಾ..
ಓಂಕಾರದ ಶಂಕನಾದಕಿಂತ ಕಿಂಚಿದೂನ
, ಕವಿಯ ಏಕತಾನ..
ಕವನದಂತೆ ನಾದ ಲೀಲ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ
,
ಮಸೆದ ಗಾಳಿ ಪಕ್ಕ ಪಡೆಯುತ್ತಿತ್ತು ಸಹಜ ಪ್ರಾಸ
, ಮಿಂಚಿ ಮಾಯವಾಗುತ್ತಿತ್ತು..
ಒಂದು ಮಂದಹಾಸ.. ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ...

ಇದು ಸಾಧನಕೇರಿಯ ಮಾಸ್ತರ ಅಮೋಘ ಕಲ್ಪನೆ. ಭಾವದ ಬೆನ್ನೇರಿ ಕಲ್ಪನಾ ವಿಲಾಸದಿಂದ ಮೆರೆದು5;, ಕವನದ ಶೃಂಗಾರ ದಂಡೆಯನ್ನು ಕಟ್ಟಿದ ಶ್ರಾವಣ ಪ್ರತಿಭೆ. ಶ್ರಾವಣ ಬಂತು ನಾಡಿಗೆ, ಬಂತು ಕಾಡಿಗೆ.. ಬಂತು ಬೀಡಿಗೇ ಬಂತೂ ಶ್ರಾವಣ... ಎಂದು ಹಾಡಿದ ಬೇಂದ್ರೆ ತಮ್ಮ ಕೃತಿಗಳಿಂದ ಮನಸ್ಸಿಗೆ ಅಮಿತಾನಂದ ನೀಡುವುದರ ಜೊತೆಗೆ ಕನ್ನಡವ ಮರೆತು ನಿದ್ರಾವಸ್ತೆಯಲ್ಲಿದ್ದ ಕಣ್ಣುಗಳನ್ನು ತೆರೆಸಿದ ವರಕವಿ.

ಬೇಂದ್ರೆ ಅವರು ಹುಟ್ಟಿದ್ದು ೧೮೯೬ ಜನವರಿ ೩೧ರಂದು. ಹುಟ್ಟೂರು ಧಾರವಾಡ, ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ. ಬೇಂದ್ರೆಯವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ.ಬೇಂದ್ರೆ). ಬೇಂದ್ರೆ ಅವರು ಅಂಬಿಕಾತನಯ ದತ್ತ ರಾದದ್ದು ೧೯೧೮ರಲ್ಲಿ. ಆಗವರಿಗೆ ೨೨ ವರ್ಷ. ಅವರ ಮೊದಲ ಕವಿತೆ ಪ್ರಭಾತ ಪತ್ರಿಕೆಯಲ್ಲಿ ಪ್ರಕಟಗೊಂಡಂದಿನಿಂದ ಬೇಂದ್ರೆ ಅವರಿಗೆ ಆ ಕಾವ್ಯನಾಮ ಸ್ಥಿರವಾಯ್ತು.

ಕನ್ನಡ ಭಾಷೆಯ ಸಿರಿಸೌಂದರ್ಯವನ್ನು ಬಿಂಬಿಸಿ ಬದುಕನ್ನೇ ನಾಕು ತಂತಿಯಾಗಿ ಮಾಡಿ ಸುಂದರ ಸಾಹಿತ್ಯವನ್ನು ಮೀಟಿದ ಬೇಂದ್ರೆಯವರು ತಮ್ಮ ಕೃತಿಗಳ ಮೂಲಕ ಕನ್ನಡದ ಘಮಲನ್ನು ರಾಷ್ಟ್ರಾದ್ಯಂತ ಪಸರಿಸಿದರು. ಅವರ ಎಲ್ಲ ಕಾವ್ಯಗಳಲ್ಲೂ ಮತ್ತು ಬರಿಸುವ ಗತ್ತು, ಕನ್ನಡ ನುಡಿ ಮಾಧುರ್‍ಯವನ್ನು ಹೊರಹೊಮ್ಮಿಸುವ ಗಮ್ಮತನ್ನು ಕಾಣಬಹುದು.

ಬೇಂದ್ರೆಯವರ ಬಗ್ಗೆ ಕವಿ ಎಸ್.ವಿ. ಶ್ರೀನಿವಾಸರಾಯರು ಬರೆದ ಸಾಲುಗಳು ಹೀಗಿವೆ : ಬೇಂದ್ರೆ ಸಾಧನಕೇರಿಯ ಕವಿವರ್ಯ, ನಾಕುತಂತಿಯ ವೈಣಿಕ ಗಂಗಾವತರಣದ ಭಗೀರಥ ನಾದಲೀಲೆಯ ನಾದೋಪಾಸಕ.... ಕಲ್ಪನೆ ಗರಿ ಬಿಚ್ಚಿ ಮಯೂರ ನೃತ್ಯ ಆರಂಭಿಸಿದಾಗ ಉಯ್ಯಾಲೆಯಲ್ಲಿ ತೂಗಾಡುತ್ತಿದ್ದ ಕವಿ ಹೃದಯದಿಂದ ಹೊರಹೊಮ್ಮಿದ್ದು ಸಖೀಗೀತ ಹಾಡುಪಾಡು ಸೂರ್‍ಯಪಾನ ಕಾಮಕಸ್ತೂರಿ ಮುಂತಾದವು..."

ಶಿಕ್ಷಣ : ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲೇ ಮುಗಿಸಿ, ಪೂನಾದ ಫರ್ಗ್ಯೂಸನ್ ಕಾಲೇಜಿನಲ್ಲಿ ಬಿ.ಎ. ಮುಗಿಸಿ ಸ್ನಾತಕೋತ್ತರ ಪದವಿಯನ್ನೂ ಪಡೆದ ಬೇಂದ್ರೆ ಅವರಿಗೆ ಬಾಲ್ಯದಿಂದಲೇ ಓದುವ, ಬರೆಯುವ ಗೀಳು ಅಂಟಿತ್ತು. ತಮ್ಮ ಕೃತಿಗಳ ಮೂಲಕ ಸಾಹಿತ್ಯ ಸರಸ್ವತಿಯನ್ನು ಅನವರತ ಅರಾಸಿದ ಬೇಂದ್ರೆ ಅವರು ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ.

ಕನ್ನಡ ಸಾಹಿತ್ಯದ ಜೊತೆಗೆ ಇಂಗ್ಲಿಷ್ -ಮರಾಠಿಯಲ್ಲೂ ಅವರು ಕೃತಿ ರಚಿಸಿದ್ದಾರೆ. ಹದಿನಾಲ್ಕು ನಾಟಕ, ಕಥಾ ಸಂಕಲನ, ೨೯ ಕವನಸಂಕಲನ, ೯ ವಿಮರ್ಶಾ ಲೇಖನ, ೨ ಭಾಷಣ, ಐದು ಮರಾಠಿ ಗ್ರಂಥ, ಇಂಗ್ಲಿಷ್ ಲೇಖನಗಳ ಸಂಗ್ರಹ, ಏಳು ಅನುವಾದಿತ ಕೃತಿಗಳನ್ನು ಬೇಂದ್ರೆ ನಾಡಿಗೆ ನೀಡಿದ್ದಾರೆ.

ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕಾರ (ಅರಳು ಮರಳು ೧೯೫೮), ಪದ್ಮಶ್ರೀ (೧೯೬೮), ಜ್ಞಾನಪೀಠ (ನಾಕುತಂತಿ- ೧೯೭೪), ಗೌರವ ಡಾಕ್ಟರೆಟ್ (ಮೈಸೂರು ವಿವಿ) ಪಡೆದ ಬೇಂದ್ರೆ ಅವರು ೮೦ ವರ್ಷಗಳ ತುಂಬು ಜೀವನ ನಡೆಸಿದರು. ಬೇಂದ್ರೆ ನಮ್ಮನ್ನಗಲಿದ್ದು ೨೬-೧೦-೧೯೮೧ರಂದು.

ಶಿವಮೊಗ್ಗದಲ್ಲಿ ನಡೆದ ೨೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ವರಕವಿಯ ಬಗ್ಗೆ ಅವರ ಕೃತಿಗಳ ಬಗ್ಗೆ ಮತ್ತೊಬ್ಬ ಶ್ರೇಷ್ಠ ಕವಿ ತೀ.ನಂ.ಶ್ರೀ ಹೀಗೆ ಹೇಳುತ್ತಾರೆ: ಬೇಂದ್ರೆಯವರ ಕವಿತೆ ಒಂದು ಚಿಲುಮೆ, ಅದು ನೋಡಲು ಚಿಕ್ಕದು ಆದರೆ, ತೋಡಿದಷ್ಟೂ ಅರ್ಥ ಉಕ್ಕಿ ಹರಿಯುತ್ತದೆ ಈ ಮಾತುಗಳು ನಿಜಕ್ಕೂ ಅರ್ಥಪೂರ್ಣ, ಔಚಿತ್ಯ ಪೂರ್ಣ.. ಬೇಂದ್ರೆಯವರ ಕಾವ್ಯಗಳು ಇದನ್ನು ಸಾರಿ ಹೇಳುತ್ತವೆ.

ಅರಳು ಮರಳುವಿನ ಪುಟ - ಪುಟಗಳಲ್ಲೂ ಇದು ಸುಟಗೊಳ್ಳುತ್ತದೆ. ಇಲ್ಲಿ ಏಕನಾದದ ಶ್ರುತಿ, ವೀಣೆಯ ಮಿಡಿತ, ಸಂಗೀತ ಸುಧೆ ಎಲ್ಲವೂ ಇದೆ...

ಮರುಳನಲ್ಲ ನಾನು, ಮರುಳಾದೆನಯ್ಯಾ
ನನ್ನೆದೆಯ ಮರುಳ ಸಿದ್ಧ
ನಿಮ್ಮರುಳಿನಿಂದ ಮರಮರಳಿ ಅರಳಿ
ಸುಟವಾಗಿ ಭಾವ ಶುದ್ಧ.
ಓ ತಾಯಿ ಬಂದೆ, ಮಾ ಮಾಯಿ ಎಂದೆ, ಈ ಬಾಯಿ ತುಂಬು ಒಂದೇ
ಮಕರಂದ ಪಾನದ ಝರೀ
ತೆಂತೆರಿ ನಿನ್ನ ತಾವರೀ
ಬಂದದ ತುಂಬಿಯಾ ಮರಿ

ನಾಕು ತಂತಿಯ ನಾಕು ಸಾಲುಗಳು ಹೀಗಿವೆ :  

ತಾನೊ? ನಾನೊ?
ನೀನೊ
ಏನೇನೊ!
ಆತನೊ
? ಆತ್ಮನೊ
ಅವನೊ
ನಾಕುತಂತಿಯಲ್ಲಿ
ನಾನು ನೀನು
ಆನು ತಾನು
ನಾ ನಾಕು ತಂತಿ"

ಈ ಸಾಲುಗಳಲ್ಲಿ ಭಾವ ಭಾರವಾಗಿದೆ. ಕಾವ್ಯ ಕುಸುಮವು ಕಲ್ಪನೆಯ ಉತ್ತುಂಗದಲ್ಲಿ ಅರಳಿ ನಿಂತಿದೆ. ಕನ್ನಡದ ಕಂಪು ಗಮಗಮಿಸಿದೆ. ವರಕವಿಯ ಕಾವ್ಯದ ವೈಶಿಷ್ಟ್ಯ ಅವರ ಕಾವ್ಯ ಸುಧೆಯ ಸವಿದಾಗ ಮಾತ್ರ ತಿಳಿಯಲು ಸಾಧ್ಯ. ಬೇಂದ್ರೆ ವರ್ಣಾನಾತೀತ ವ್ಯಕ್ತಿ. ಅವರ ಕಾವ್ಯಗಳೂ ಕೂಡ..

ಮುಖಪುಟ /ಸಾಧಕರು