|
ಮುಖಪುಟ
/ಪ್ರವಾಸಿತಾಣ/ನಮ್ಮ
ದೇವಾಲಯಗಳು
ಕಾವೇರಿ ತಟದ ಪುಣ್ಯಕ್ಷೇತ್ರ ತಲಕಾಡು *ಟಿ.ಎಂ.ಸತೀಶ್
ತಲಾ ಮತ್ತು ಕಾಡ ಎಂಬ ಇಬ್ಬರು ಕಿರಾತ ಸೋದರರಿಂದ ಈ ಊರಿಗೆ ತಲಕಾಡು ಎಂದು ಹೆಸರು ಬಂದಿದೆ ಎಂಬುದು ಸ್ಥಳ ಪುರಾಣ. ಅರಮನೆಗಳ ನಗರಿ ಮೈಸೂರಿಗೆ ೫೮ ಕಿಲೋ ಮೀಟರ್ ದೂರದಲ್ಲಿರುವ ಈ ಊರಿನಲ್ಲಿ ಪಂಚಲಿಂಗಗಳ ಪೈಕಿ ಮೂರು ಲಿಂಗಗಳಿವೆ.
ತಲಕಾಡಿನ ಶಿವನಿಗೆ ಗಜಾರಣ್ಯನಾಥ ಎಂದೂ ಕರೆಯುತ್ತಾರೆ. ಇದಕ್ಕೂ ಒಂದು ಕಥೆಯಿದೆ. ಆನೆಯ ಜನ್ಮ ಪಡೆದಿದ್ದ ಸೋಮದತ್ತನೆಂಬ ಋಷಿ ಮತ್ತು ಆತನ ಶಿಷ್ಯರು ಇಲ್ಲಿ ಮೋಕ್ಷ ಪಡೆದಿದ್ದರಿಂದ ಇದು ಗಜಾರಣ್ಯ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ತಲಕಾಡು ಹಿಂದೆ ಗಂಗ ಅರಸರ ರಾಜಧಾನಿಯಾಗಿತ್ತು. ಗಂಗರಸ ಹರಿವರ್ಮ ಇಲ್ಲಿ ನೆಲೆಸಿದ್ದನೆಂಬುದಕ್ಕೆ ಶಾಸನದ ಬಲವೂ ಇದೆ. ಚೋಳರೂ ಈ ಕ್ಷೇತ್ರವನ್ನು ಆಳಿದ್ದು, ಆಗ ಇದು ರಾಜರಾಜಪುರ ಎಂದೂ ಕರೆಸಿಕೊಂಡಿತ್ತು. ನಂತರ ಇದು ಹೊಯ್ಸಳರ ಆಳ್ವಿಕೆಗೆ ಕೂಡ ಒಳಪಟ್ಟು ಪುರೋಭಿವೃದ್ಧಿ ಹೊಂದಿತು. ೧೩೪೨ರಲ್ಲಿ ವಿಜಯನಗರದರಸರ ಆಳ್ವಿಕೆಯಲ್ಲಿ ಸ್ಥಳೀಯ ಮಾಧವ ಮಂತ್ರಿ ಊರಿನಂಚಿನಲ್ಲಿ ಪ್ರಶಾಂತವಾಗಿ ಹರಿಯುತ್ತಿದ್ದ ಕಾವೇರಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಿಸಿದ. ಪರಿಣಾಮವಾಗಿ ಊರು ಮರಳ ಗುಡ್ಡವಾಗಿ ಪರಿಣಮಿಸಿತೆನ್ನುತ್ತಾರೆ ಕೆಲವರು. ಆದರೆ, ತಲಕಾಡು ಮರಳಾದ ಬಗ್ಗೆ ಬೇರೆಯದೇ ಕಥೆ ಇದೆ.
ವಿಜಯನಗರದರಸ ಪ್ರತಿನಿಯಾದ
ಶ್ರೀರಂಗರಾಯ ಎಂಬಾತ ಶ್ರೀರಂಗಪಟ್ಟಣವನ್ನಾಳುತ್ತಿದ್ದ. ಅವನಿಗೆ ಬೆನ್ನುಪಣಿರೋಗ ಬಂದು
ಯಾವ ಔಷಧದಿಂದಲೂ ಗುಣವಾಗದಿದ್ದಾಗ ವೈದ್ಯನಾಥೇಶ್ವರನಿಗೆ ಪೂಜೆ ಮಾಡಿ ತನ್ನ ರೋಗದಿಂದ
ಮುಕ್ತಿಪಡೆಯಲು ತಲಕಾಡಿಗೆ ಆಗಮಿಸಿದ. ಪತಿ ಮರಣಾವಸ್ಥೆಯಲ್ಲಿರುವನೆಂದು ತಿಳಿದ ರಾಣಿ
ತಾನೂ ಜೊತೆಗೆ ಬಂದಳು. ರಾಜ ತಲಕಾಡಿನಲ್ಲಿ ತನ್ನ ಕೊನೆಯುಸಿರೆಳೆದ. ಆತನ ಪತ್ನಿ
ಅಲಮೇಲಮ್ಮ ತಲಕಾಡಿನ ಸನಿಹದ ಮಾಲಂಗಿ ಗ್ರಾಮದಲ್ಲಿ ನೆಲೆಸಿದಳು. ಆಗ
ಇಂತಹ ಇತಿಹಾಸ ಪ್ರಸಿದ್ಧ ಹಾಗೂ ಪುರಾಣ ಪ್ರಸಿದ್ಧವಾದ ಊರಿನಲ್ಲಿ ಗಂಗರು, ಚೋಳರು, ಹೊಯ್ಸಳರು ೩೦ಕ್ಕೂ ಹೆಚ್ಚು ದೇವಾಲಯ ಕಟ್ಟಿಸಿದ್ದರೆನ್ನುತ್ತದೆ ಇತಿಹಾಸ. ಈಗ ಇಲ್ಲಿ ವೈದ್ಯನಾಥೇಶ್ವರ, ಪಾತಾಳೇಶ್ವರ, ಕೀರ್ತಿನಾರಾಯಣ, ಮರಳೇಶ್ವರ ಹಾಗೂ ಚೌಡೇಶ್ವರಿಯ ಐದು ದೇವಾಲಯಗಳಿವೆ. ಮತ್ತೊಂದು ದೇವಾಲಯ ಇತ್ತೀಚಗಷ್ಟೇ ಉತ್ಖನನ ಕಾಲದಲ್ಲಿ ಹೊರಹೊಮ್ಮಿದೆ. ವೈದ್ಯೇಶ್ವರ ದೇವಾಲಯ ಇಲ್ಲಿರುವ ಭವ್ಯ ದೇಗುಲ. ಕೀರ್ತಿನಾರಾಯಣ ದೇಗುಲ ಹೊಯ್ಸಳರು ಕಟ್ಟಿಸಿದ ಏಕಮಾತ್ರ ದೇಗುಲ. ವೈದ್ಯೇಶ್ವರ ಊರಿನ ಪ್ರಮುಖ ದೇಗುಲ. ಇದನ್ನು ಮಾಧವ ಮಂತ್ರಿ ಕಟ್ಟಿಸಿದನೆಂದು ಪ್ರತೀತಿ. ಕಣಶಿಲೆಯಿಂದ ನಿರ್ಮಿಸಿರುವ ಈ ದೇಗುಲದಲ್ಲಿ ಸುಂದರ ಶಿಲ್ಪಾಲಂಕರಣಗಳಿವೆ. ಹೊರಬಿತ್ತಿಯ ಬಲ ಭಾಗದಲ್ಲಿ ಮೂಷಿಕ ವಾಹನನಾದ ಗಣಪನ ಸುಂದರ ಕೆತ್ತನೆಯಿದೆ. ಅಡ್ಡ ಪಟ್ಟಿಕೆಗಳಲ್ಲಿ ಹಲವು ಶಿಲ್ಪಗಳಿವೆ. ವಿಶಾಲವಾದ ಪ್ರಾಕಾರದಲ್ಲಿ ಸಣ್ಣ ಸಣ್ಣ ಇತರ ದೇವರ ಗುಡಿಗಳಿವೆ. ಮುಖ್ಯದ್ವಾರದ ಬಳಿ ಸುಂದರ ಕೆತ್ತನೆಯ ೧೦ ಅಡಿ ಎತ್ತರದ ದ್ವಾರಪಾಲರ ಮೂರ್ತಿಗಳಿವೆ. ಇಷ್ಟು ಎತ್ತರವಾದ ದ್ವಾರಪಾಲಕ ಮೂರ್ತಿಗಳನ್ನು ಮತ್ತಾವ ದೇವಾಲಯದಲ್ಲೂ ನೋಡಲು ಸಿಗುವುದಿಲ್ಲ. ದ್ರಾವಿಡ-ಹೊಯ್ಸಳ ಶೈಲಿಯ ಈ ದೇಗುಲದಲ್ಲಿರುವ ಗರ್ಭಗುಡಿಯಲ್ಲಿ ಸುಂದರ ಶಿವಲಿಂಗವಿದೆ. ಕಂಚಿನ ನಟರಾಜ ಹಾಗೂ ಸುಂದರವಾದ ಉತ್ಸವ ಮೂರ್ತಿ ಮನಮೋಹಕವಾಗಿದೆ. ಕಾರ್ತಿಕ ಬಹುಳ ಅಮಾವಾಸ್ಯೆಯ ಸೋಮವಾರ ಸೂರ್ಯಚಂದ್ರರಿಬ್ಬರೂ ವೃಶ್ಚಿಕ ರಾಶಿಯಲ್ಲಿ ಸೇರಿದಾಗ ಸಂಭವಿಸುವ ಕುಹುಯೋಗದಲ್ಲಿ ಇಲ್ಲಿ ಪಂಚಲಿಂಗ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಸೇರುತ್ತಾರೆ.
ಕೆಲವೊಮ್ಮೆ ೪ ವರ್ಷದ ಅವಧಿಯಲ್ಲೊಮ್ಮೆ, ಮತ್ತೆ ಕೆಲವು ಬಾರಿ ೧೪, ೧೫ ವರ್ಷಗಳಿಗೊಮ್ಮೆ ಈ ಕುಹುಯೋಗ ಪ್ರಾಪ್ತವಾಗುತ್ತದೆ. ಈ ಹಿಂದೆ ೧೯೦೮, ೧೯೧೫, ೧೯೨೫, ೧೯೩೮, ೧೯೫೨, ೧೯೫೯, ೧೯೬೬, ೧೯೭೯, ೧೯೮೬, ೧೯೯೩ ಹಾಗೂ 2006ರಲ್ಲಿ ನಡೆದಿತ್ತು. ಕಾರ್ತೀಕ ಸೋಮವಾರಗಳಂದು, ಶಿವರಾತ್ರಿಯ ದಿನ ಇಲ್ಲಿ ಸಹಸ್ರಾರು ಭಕ್ತರು ಆಗಮಿಸಿ, ಶಿವನ ದರ್ಶನ ಮಾಡಿ ಪುನೀತರಾಗುತ್ತಾರೆ. ದೇಗುಲದ ಅನತಿ ದೂರದಲ್ಲೇ ಮಂದಗತಿಯಲ್ಲಿ ಹರಿಯುವ ತಿಳಿನೀರ ಕಾವೇರಿ ನದಿಯಲ್ಲಿ ಆಡಿ ನಲಿಯುತ್ತಾರೆ. ನೀಲಾಗಸದ ಛಾಯೆಯಲ್ಲಿ ಕಂಗೊಳಿಸುವ ಈ ನದಿಯಲ್ಲಿ ತೆಪ್ಪದ ದೋಣಿ ವಿಹಾರ ಎಲ್ಲರಿಗೂ ಪ್ರಿಯವಾಗುತ್ತದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in | |||