ಮೈಸೂರು ಹುಲಿಯ ಶ್ರೀರಂಗ ಪಟ್ಟಣ *ಟಿ.ಎಂ. ಸತೀಶ್
ಇತಿಹಾಸ: ಗೌತಮಕ್ಷೇತ್ರ ಎಂದೇ ಹೆಸರಾದ ಇಲ್ಲಿ ಕಾವೇರಿ ತೀರದಲ್ಲಿ ಮಲಗಿರುವ ಶ್ರೀರಂಗನಾಥ ಸ್ವಾಮಿಯ ಪುರಾತನ ದೇವಾಲಯವಿದೆ. ಗೌತಮ ಋಷಿಗಳು ಇಲ್ಲಿ ಶ್ರೀರಂಗನಾಥನ ಪೂಜಿಸುತ್ತಾ ವಾಸಿಸಿದ್ದರಂತೆ. ಕ್ರಿ.ಶ.894ರಲ್ಲಿ ಗಂಗರ ಸಾಮಂತರಾಜ ತಿರುಮಲಯ್ಯ ಇಲ್ಲಿ ರಂಗನಾಥಸ್ವಾಮಿಯ ಭವ್ಯ ದೇವಾಲಯ ನಿರ್ಮಿಸಿ ಶ್ರೀರಂಗಪುರ ಎಂದು ಹೆಸರಿಟ್ಟ. ನಂತರ ಈ ಊರು ಹೊಯ್ಸಳರು, ಮೈಸೂರರಸರು, ವಿಜಯನಗರದರಸರ ಆಳ್ವಿಕೆಗೂ ಒಳಪಟ್ಟಿತ್ತು. 1761ರಲ್ಲಿ ಪಟ್ಟಣ ಹೈದರಾಲಿಯ ವಶವಾಯ್ತು. ಆದರೆ ಇದು ಅಭಿವೃದ್ಧಿಹೊಂದಿದ್ದು ಟಿಪ್ಪುವಿನ ಆಳ್ವಿಕೆಯಲ್ಲಿ. 1799ರಲ್ಲಿ ಮೈಸೂರು ಹುಲಿ ಟಿಪ್ಪು ಅಳಿದ ನಂತರ ಪಟ್ಟಣ ಬ್ರಿಟಿಷರ ವಶವಾಯ್ತು. ರಂಗನಾಥ ದೇವಾಲಯ: ದ್ರಾವಿಡ ಶೈಲಿಯ ರಂಗನಾಥ ದೇಗುಲ ಹೊಯ್ಸಳರ ಕಾಲದ್ದು. ಏಳು ಹೆಡೆಯ ಸರ್ಪದ ಮೇಲೆ ರಂಗನಾಥ ಮಲಗಿರುವ ಹಾಗೂ ಪಾದದ ಬಳಿ ಲಕ್ಷ್ಮೀದೇವಿ ವಿಗ್ರಹವಿದೆ. ಗೌತಮ ಋಷಿಗಳ ವಿಗ್ರಹವೂ ಇದೆ. ಪ್ರಾಕಾರದಲ್ಲಿ ಹಲವು ದೇವಾಲಯಗಳಿದ್ದು ಗಂಗಾಧರ ಹಾಗೂ ನರಸಿಂಹ ದೇವಾಲಯ ಪ್ರಮುಖವಾದ್ದು. ಆಂಜನೇಯನ ಆಳೆತ್ತರದ ಮೂರ್ತಿ ಸುಂದರವಾಗಿದೆ. ದೇಗುಲದ ಹೊರಗೆ ಗಂಜೀಫಾ ಕಲೆಯ ಆರ್ಟ್ ಗ್ಯಾಲರಿ ಇದೆ. ಕೋಟೆ : ಶ್ರೀರಂಗಪಟ್ಟಣವನ್ನು ಶತ್ರುಗಳಿಂದ ರಕ್ಷಿಸಲು ಸುತ್ತಲೂ ನಿರ್ಮಿಸಲಾಗಿರುವ ಕೋಟೆಯನ್ನು ಇಂದಿಗೂ ನೋಡಬಹುದು. ಈ ಕೋಟೆಯ ಸುತ್ತಲೂ ಕಂದಕ ತೋಡಲಾಗಿದ್ದು ಇದರಲ್ಲಿ ಕಾವೇರಿ ನೀರು ಸದಾ ಹರಿಯುತ್ತಿತ್ತು. ಹೀಗಾಗಿ ಕೋಟೆಯಪ್ರವೇಶ ಬಹಳ ದುರ್ಗಮವಾಗಿತ್ತು. ಟಿಪ್ಪೂ ವಾಸಿಸುತ್ತಿದ್ದನೆಂದು ಹೇಳಲಾಗುವ ಲಾಲ್ಮಹಲ್ ಸಂಪೂರ್ಣ ನಾಶವಾಗಿದೆ. ಇನ್ಮನ್ ಮತ್ತು ಕರ್ನಲ್ ಬೆಯಲಿಯನ್ನು ಬಂಸಿಟ್ಟಿದ್ದ ನೆಲಮಾಳಿಗೆ ಬಂದೀಖಾನೆಗಳಿವೆ. ಕೋಟೆಯ ಒಳಗೆ ಟಿಪ್ಪು 1787ರಲ್ಲಿ ಕಟ್ಟಿಸಿದ ಎರಡು ದೊಡ್ಡ ಮಿನಾರಗಳಿಂದ ಕೂಡಿದ ಜುಮ್ಮ ಮಸೀದಿ ಇದೆ. ಮಿನಾರ ಗೋಪರಕ್ಕೆ ಹೋಗಲು ಮೆಟ್ಟಿಲುಗಳಿವೆ.
ಕಾವೇರಿ: ಇಲ್ಲಿ ಕಾವೇರಿ ಪಶ್ಚಿಮಾಭಿಮುಖವಾಗಿ ಹರಿಯುವ ಕಾರಣ ಪಶ್ಚಿಮ ವಾಹಿನಿ ಎಂದೇ ಖ್ಯಾತವಾಗಿದೆ. ಕಾವೇರಿ ಹರಿವ ಮಾರ್ಗದಲ್ಲಿ ಮೂರು ರಂಗನಾಥ ಸ್ವಾಮಿ ದೇವಾಲಯಗಳಿದ್ದು ಇದು ಆದಿ ರಂಗ (ಮೊದಲನೆಯದು) ಮಧ್ಯ ರಂಗ ಶಿವನಸಮುದ್ರದ ಬಳಿ ಇದೆ. ಅಂತ್ಯರಂಗ ತಮಿಳುನಾಡಿನ ಶ್ರೀರಂಗಂನಲ್ಲಿದೆ. ಮೈಸೂರಿಗೆ 16 ಕಿಲೋ ಮೀಟರ್ ದೂರದಲ್ಲಿರುವ ಪಟ್ಟಣದಿಂದ ಬೆಂಗಳೂರಿಗೆ 125 ಕಿ.ಮೀ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in | |||