ಮುಖಪುಟ /ಪಾಕಶಾಲೆ

ಬಿಸಿಬೇಳೆ ಬಾತ್ ಮಾಡುತ್ತೀರೇನು?

 ಹುರುಳಿಕಾಯಿ, ಕ್ಯಾರೆಟ್, ಬಟಾಣಿ, ಆಲೂಗಡ್ಡೆ ಮುಂತಾದ ತರಕಾರಿ ಹಾಕಿ ಮಾಡಿದ ಬಿಸಿ ಬೇಳೆ ಬಾತ್ ತಿನ್ನಲು ಬಲು ರುಚಿ. ಬೇಳೆ ಬಾತನ್ನು ಕೆಲವರು ಕಾಂಕ್ರೀಟ್ ಅಂತ ಛೇಡಿಸುವುದೂ ಉಂಟು. ಆದರೆ, ಹಲವರಿಗೆ ಪ್ರಿಯವಾದ ಈ ತಿಂಡಿ ತಯಾರಿಸುವ ವಿ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥ: ಅರ್ಧ ಕೆಜಿಯಷ್ಟು ಅಕ್ಕಿ, ಅರ್ಧ ಕೆಜಿ ತೊಗರಿ ಬೇಳೆ, ೧೦೦ ಗ್ರಾಂನಷ್ಟು ತುಪ್ಪ, ಎಂಟು ಹತ್ತು ಒಣಮೆಣಸಿನಕಾಯಿ, ಒಂದು ಪುಟ್ಟ ಚಮಚದಷ್ಟು ಇಂಗು, ಚೂರು ಹುಣಸೆ ಹಣ್ಣು, ಒಂದರ್ಧ ಗಿಟುಕು ಕೊಬ್ಬರಿತುರಿ, ಸ್ವಲ್ಪ ತೆಂಗಿನತುರಿ, ಅರಿಶಿನಪುಡಿ, ಎರಡು ಮೂರು ಚೂರು ದಾಲ್ಚಿನ್ನಿ ಚಕ್ಕೆ, ಒಂದೊಂದು ಹಿಡಿ ಕಡಲೆಬೇಳೆ, ಉದ್ದಿನಬೇಳೆ, ಒಂದು ಚಮಚ ಸಾಸಿವೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು. 

 ತಯಾರಿಸುವ ವಿಧಾನ: ಒಂದು ಪ್ಯಾನ್‌ಗಳಲ್ಲಿ ಶುದ್ಧವಾಗಿ ತೊಳೆದ ತೊಗರಿಬೇಳೆ, ಹೆಚ್ಚಿದ ತರಕಾರಿ, ಉಪ್ಪು ಹಾಕಿಡಿ, ಮತ್ತೊಂದು ಪ್ಯಾನ್‌ನಲ್ಲಿ ಅನ್ನ ಮಾಡಲು ಅಕ್ಕಿ ಹಾಕಿ ಕುಕ್ಕರ್‌ನಲ್ಲಿ ಹಾಕಿ ಒಲೆಯ ಮೇಲಿಡಿ. ಅದು ಬೆಂದ ಬಳಿಕ, ಒಣಮೆಣಸಿನಕಾಯಿ, ಕಡಲೆಬೇಳೆ, ಉದ್ದಿನಬೇಳೆ, ದಾಲ್ಚಿನ್ನಿ ಚಕ್ಕೆ, ಕೊತ್ತಂಬರಿಬೀಜ ಹುರಿದು ಪುಡಿ ಮಾಡಿ ತಯಾರಿಸಿದ ಹುಳಿಪುಡಿಗೆ ಕೊಬ್ಬರಿತುರಿ, ಹಾಗೂ ತೆಂಗಿನತುರಿ ಮತ್ತು ಕಿವುಚಿದ ಹುಣಸೆಹಣ್ಣು ನೀರು ಸೇರಿಸಿ ಮಿಕ್ಸರ್‌ನಲ್ಲಿ ರುಬ್ಬಿದರೆ, ಮಸಾಲೆ ತಯಾರಾಗುತ್ತದೆ. 

 ಈ ಮಸಾಲೆಯನ್ನು ಬೆಂದ ಬೆಳೆ-ತರಕಾರಿ ಜೊತೆ ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೆ ಅನ್ನ ಹಾಕಿ ಕಲೆಸಿ, ಮುರಿದ ಕೆಂಪು ಮೆಣಸಿನಕಾಯಿ, ಕರಿಬೇವು, ಇಂಗು -ಸಾಸಿವೆ ಒಗ್ಗರಣೆ ಹಾಕಿದರೆ, ಬಿಸಿಬೇಳೆ ಬಾತ್ ಸಿದ್ಧ. ಬಾತ್ ಜೊತೆಗೆ ಕರಿದ ಖಾರಾ ಬೂಂದಿಕಾಳು ಅಥವಾ ಚಿಪ್ಸ್ ಇದ್ದರೆ ಅದರ ರುಚಿಯೇ ಬೇರೆ.

 

ಮುಖಪುಟ /ಪಾಕಶಾಲೆ