ಮುಖಪುಟ
/ಸುದ್ದಿ
ಸಮಾಚಾರ ಡಾ. ಜಿ. ಪರಮೇಶ್ವರ್ ಕೆ.ಪಿ.ಸಿ.ಸಿ. ನೂತನ ಸಾರಥಿ
ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಕರ್ನಾಟಕ ಸೇರಿದಂತೆ ಒಟ್ಟು 18 ರಾಜ್ಯ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಹಾಲಿ ಅಧ್ಯಕ್ಷರಾಗಿರುವ ಆರ್.ವಿ.ದೇಶಪಾಂಡೆ ಅವರ ಅಧಿಕಾರಾವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರ ನೇಮಕ ಆಗಿದೆ. ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನಕ್ಕಾಗಿ ಕಳೆದ ಕೆಲವು ತಿಂಗಳುಗಳಿಂದಲೂ ತೀವ್ರ ಪೈಪೋಟಿ ನಡೆದಿತ್ತು. ನೆರೆ ಸಂತ್ರಸ್ತರ ಹಣವನ್ನು ಕಾಂಗ್ರೆಸ್ ದುರುಪಯೋಗ ಪಡಿಸಿಕೊಂಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಗೆ ಒತ್ತಾಯ ಕೇಳಿಬಂದಿತ್ತು. ಆಗಿನಿಂದಲೇ ಅಧ್ಯಕ್ಷಗಾದಿಗೆ ಹಿರಿಯ ಕಾಂಗ್ರೆಸ್ ನಾಯಕರು ದೆಹಲಿಯ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರ ಆರಂಭಿಸಿದ್ದರು. ಆದರೆ, ಆ ಸಂದರ್ಭದಲ್ಲಿ ನಡೆದ ವಿಧಾನಸಭೆ ಅಧಿವೇಶನದ ವೇಳೆ ಅಕ್ರಮ ಗಣಿಗಾರಿಕೆ ಕುರಿತಂತೆ ಪ್ರತಿಪಕ್ಷಗಳು ನಡೆಸಿದ ಅಹೋರಾತ್ರಿ ಧರಣಿ, ಸದನದಲ್ಲಿ ಕೆಲವು ಬಿಜೆಪಿ ಶಾಸಕರು ಬಳ್ಳಾರಿಗೆ ಬನ್ನಿ ನೋಡಿಕೊಳ್ಳುತ್ತೇವೆ ಎಂದು ಹಾಕಿದ ಸವಾಲು ತದ ನಂತರ ನಡೆದ ಬಳ್ಳಾರಿ ಪಾದಯಾತ್ರೆ, ಗುಲ್ಬರ್ಗಾ ದಕ್ಷಿಣ ಮತ್ತು ಕಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ, ಕಳೆದ ಒಂದು ತಿಂಗಳ ರಾಜಕೀಯ ವಿದ್ಯಮಾನಗಳಿಂದಾಗಿ ಕೆ.ಪಿ.ಸಿ.ಸಿ. ಅಧ್ಯಕ್ಷರ ನೇಮಕ ಮುಂದಕ್ಕೆ ಹೋಗಿತ್ತು. ಈ ಮಧ್ಯೆ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರವನ್ನು ಪಕ್ಷ ಸೋನಿಯಾಗಾಂಧಿ ಅವರಿಗೆ ನೀಡಿತ್ತು. ಅಳೆದು, ಸುರಿದು, ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯದಲ್ಲಿ ನೆಲಕಚ್ಚಿರುವ ಪಕ್ಷವನ್ನು ಮತ್ತೆ ಬಲಗೊಳಿಸಲು, ಎಲ್ಲರನ್ನೂ ಒಗ್ಗೂಡಿಸಿ, ಪಕ್ಷ ಸಂಘಟನೆಗೆ ಯಾರು ಸೂಕ್ತ ಎಂಬ ಬಗ್ಗೆ ಚರ್ಚಿಸಿ ಸಂಭಾವಿತ, ಮಿತುಭಾಷಿ ಡಾ. ಜಿ. ಪರಮೇಶ್ವರ್ ಸೂಕ್ತ ವ್ಯಕ್ತಿ ಎಂದು ಕಾಂಗ್ರೆಸ್ ನಿರ್ಧರಿಸಿತು. ಪರಿಶಿಷ್ಟ ಜಾತಿಗೆ ಸೇರಿದ ಡಾ. ಜಿ. ಪರಮೇಶ್ವರ್ ಅವರ ನೇಮಕದಿಂದಾಗಿ ದಲಿತ ಸಮುದಾಯದ ಮತಗಳನ್ನು ಮತ್ತೆ ಕಾಂಗ್ರೆಸ್ ಗೆ ಸೆಳೆಯಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ಮುಂದಿನ ತಿಂಗಳು ನಡೆಯಲಿರುವ ಹಿನ್ನೆಲೆಯಲ್ಲಿ ಈ ನೇಮಕ ಮಹತ್ವ ಪಡೆದಿದ್ದು, ಕಾಂಗ್ರೆಸ್ ಲೆಕ್ಕಾಚಾರ ಎಷ್ಟರ ಮಟ್ಟಿಗೆ ಫಲಿಸಲಿದೆ ಎಂಬುದನ್ನು ಕಾದು ನೋಡಬೇಕು. | |||