ಮುಖಪುಟ
/ಸುದ್ದಿ
ಸಮಾಚಾರ ಭೂಹಗರಣ : ಕಟ್ಟಾಸುಬ್ರಹ್ಮಣ್ಯನಾಯ್ಡು ರಾಜೀನಾಮೆ
ರಾಜೀನಾಮೆಯನ್ನು ಪಡೆದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಅಂಗೀಕರಿಸುವಂತೆ ಶಿಫಾರಸು ಮಾಡಿ ರಾಜ್ಯಪಾಲರಿಗೆ ಕಳುಹಿಸಿದ್ದು, ರಾಜ್ಯಪಾಲರು ಅದನ್ನು ಅಂಗೀಕರಿಸಿದ್ದಾರೆ. ಇದನ್ನು ಖಚಿತಪಡಿಸಿರುವ ಮುಖ್ಯಮಂತ್ರಿ, ಲೋಕಾಯುಕ್ತರು ಆರೋಪ ಪಟ್ಟಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕಟ್ಟಾ ಸುಬ್ರಹ್ಮಣ್ಯ ರಾಜೀನಾಮೆ ನೀಡಿದ್ದಾರೆ ಎಂದರು. ಈ ಮಧ್ಯೆ ತಾವು ಯಾವುದೇ ತಪ್ಪು ಎಸಗಿಲ್ಲ, ತಾವು ನಿರ್ದೋಷಿ ಎಂದು ಸಾಬೀತಾದ ಬಳಿಕ ಮತ್ತೆ ಸಂಪುಟಕ್ಕೆ ಮಹಳುವ ವಿಶ್ವಾಸವನ್ನು ಕಟ್ಟಾ ಸುಬ್ರಹ್ಮಣ್ಯನಾಯ್ಡು ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ, ಪಕ್ಷಕ್ಕೆ ಮುಜುಗರ ಉಂಟು ಮಾಡಬಾರದು ಎಂಬ ಕಾರಣಕ್ಕಾಗಿ ತಾವು ರಾಜೀನಾಮೆ ನೀಡಿದ್ದಾಗಿ ಹೇಳಿಕೆ ನೀಡಿದ್ದಾರೆ. ವೈಷ್ಣೋದೇವಿ ದರ್ಶನಕ್ಕೆ ತೆರಳಿರುವ ಅವರು ಸೋಮವಾರ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಈ ಮಧ್ಯೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಬಂಧಿಸುವ ವಿಚಾರ ಲೋಕಾಯುಕ್ತ ಪೊಲೀಸರಿಗೆ ಬಿಟ್ಟಿದ್ದು, ತಮ್ಮ ಬಳಿ ಇರುವ ದಾಖಲೆಗಳ ಪ್ರಕಾರ ಬಂಧಿಸಬಹುದಾಗಿದ್ದರೂ ಅದರ ಅಗತ್ಯ ಈಗ ಇಲ್ಲ. ಎಫ್.ಐ.ಆರ್. ಹಾಕಿದ ಮಾತ್ರಕ್ಕೆ ಬಂಧಿಸಲೇಬೇಕೆಂದೇನೂ ಇಲ್ಲ ಎಂದು ಹೇಳಿದರು. ೨೦೦೪ರಲ್ಲಿ ನೋಂದಾಯಿತವಾದ ಎಸ್.ವಿ.ಶ್ರೀನಿವಾಸ್ ನೇತೃತ್ವದದ ಇಟಾಸ್ಕಾ ಕಂಪನಿಗೆ ೨೦೦೬ರಲ್ಲಿ ಅಂದಿನ ಕೈಗಾರಿಕಾ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಅಧಿಕಾರಿಗಳ ಆಕ್ಷೇಪದ ನಡುವೆಯೂ ಕೇವಲ ೪ ದಿನಗಳಲ್ಲಿ ಕಡತವನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿ ಭೂಮಿ ಮಂಜೂರು ಮಾಡಿಸಲು ನೆರವಾಗಿದ್ದರು. ಹೀಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಡಲು ಕಟ್ಟಾ ಸುಬ್ರಹ್ಮಣ್ಯನಾಯ್ಡು ಮತ್ತು ಅವರ ಪುತ್ರ ಕಟ್ಟಾ ಜಗದೀಶ್ ಇಟಾಸ್ಕಾ ಕಂಪನಿಯ ಶ್ರೀನಿವಾಸ್ ಹಾಗೂ ಯುನೈಟೆಡ್ ಟೆಲಿಕಾಂ ಕಂಪನಿಯ ಬಸವಪೂರ್ಣಯ್ಯ ಅವರಿಂದ ೮೭ ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಲೋಕಾಯುಕ್ತರು ತಮ್ಮ ಪ್ರಥಮ ಮಾಹಿತಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ನೋಂದಣಿಯೇ ಆಗದ ಇಂದೂ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಸಂಸ್ಥೆ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಅದಕ್ಕೆ ಲಂಚದ ಹಣ ಜಮಾ ಆಗುವಂತೆ ನೋಡಿಕೊಂಡು ನಂತರ ಅದನ್ನು ಕಟ್ಟಾ ಜಗದೀಶ್ ಪಡೆದಿದ್ದಾರೆ. ಅಲ್ಲದೇ ಇದೇ ಖಾತೆಗೆ ಬಂಡಿಕೊಡಿಗೆ ಹಳ್ಳಿಯಲ್ಲಿ ಗ್ರಾಮದ ರೈತರಿಗೆ ಕೆ.ಐ.ಎ.ಡಿ.ಬಿ. ಭೂಮಿ ಸ್ವಾಧೀನ ಪಡಿಸಿಕೊಂಡಿದ್ದಕ್ಕಾಗಿ ನೀಡಿರುವ ಪರಿಹಾರದ ಚೆಕ್ಗಳೂ ಜಮೆ ಆಗಿವೆ. ಈ ಹಂತದಲ್ಲಿ ರೈತರ ಸಹಿಗಳನ್ನು ನಕಲು (ಫೋರ್ಜರಿ) ಮಾಡಿರುವುದೂ ತನಿಖೆಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಕಟ್ಟಾ ಜಗದೀಶ್ ಹಾಗೂ ಇತರ ೯ ಸಹವರ್ತಿಗಳ ವಿರುದ್ಧ ಲೋಕಾಯುಕ್ತರು ಭಾರತೀಯ ದಂಡ ಸಂಹಿತೆ (ಐ.ಪಿ.ಸಿ.) ಸೆಕ್ಷನ್ ೪೯೧ರಡಿ ಬೇರೆಯವರ ಹೆಸರಿನಲ್ಲಿ ವಂಚನೆ, ೪೨೦ರಡಿ ನೇರ ವಂಚನೆ, ೪೬೫ರಡಿ ನಕಲಿ ದಾಖಲೆ ಸೃಷ್ಟಿ, ೪೬೮ರಡಿ ಅನ್ಯರನ್ನು ವಂಚಿಸಲು ನಕಲಿ ದಾಖಲೆ ಸೃಷ್ಟಿಮಾಡಿದ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಮು ೭ರಡಿ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಕೊಡಲು ಲಂಚ ಸ್ವೀಕಾರ, ೮ರಡಿ ಸರ್ಕಾರಿ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲು ಲಂಚ ಸ್ವೀಕಾರ, ೧೨ರಡಿ ಲಂಚ ಸ್ವೀಕರಿಸಲು ಪ್ರಚೋದನೆ, ೧೩(೧)ರಡಿ ಲಂಚ ಪಡೆಯುವ ಸಂಬಂಧ ಅನುಚಿತ ವರ್ತನೆ ದೂರುಗಳನ್ನು ಸಹ ಇವರ ವಿರುದ್ಧ ದಾಖಲಿಸಲಾಗಿದೆ. | |||