|
ಮುಖಪುಟ
/ಲೇಖನಮಾಲೆ ಉಪಾಸನಾ ಬೆಳೆದು ಬಂದ ಹಾದಿ....
ಸುಗಮ ಸಂಗೀತ ಇಂದು ಇಷ್ಟು ಎತ್ತರ ಬೆಳೆಯಲು ನಾದೋಪಾಸಕರೇ ಕಾರಣ. ಇಂಥ ಒಂದು ನಾದೋಪಾಸನೆಯ ಸಂಸ್ಥೆಯೇ ಉಪಾಸನಾ ಎಂಬುದು ಅತಿಶಯೋಕ್ತಿಯ ಮಾತಲ್ಲ. ಈ ಹೊತ್ತು ಉಪಾಸನಾ ರಜತ ಗೀತ ಸಂಭ್ರಮದಲ್ಲಿದೆ. ಉಪಾಸನಾ ಸಂಸ್ಥೆಯ ಸ್ಥಾಪಕ ಜೆ. ಮೋಹನ್ ಅವರ 25ನೇ ಭಾವಗೀತೆಗಳ ಸಿ.ಡಿ. ಡಿ.25ರಂದು ಬಿಡುಗಡೆಯಾಗುತ್ತಿದೆ. ಯುವ ಪೀಳಿಗೆಗೆ ಸಂಗೀತವ ಕಲಿಸುತ್ತಾ, ಮನೆಯಂಗಳದಲ್ಲಿ ಗೀತಾರಾಧನೆ ನಡೆಸುತ್ತಾ ಕರ್ನಾಟಕದಲ್ಲಿ ಮನೆಮಾತಾಗಿರುವ ಉಪಾಸನಾ ಮೋಹನ್ ಈ ಸಿಡಿಯಲ್ಲಿ ತಮ್ಮ ಹಲವು ವರ್ಷಗಳ ಸಾಧನೆಯ ಪರಿಶ್ರಮವನ್ನು ಶ್ರೋತೃಗಳಿಗೆ ರಸವತ್ತಾಗಿ ಉಣಬಡಿಸಿದ್ದಾರೆ.
ಕನ್ನಡ ಸುಗಮ ಸಂಗೀತ ಕ್ಷೇತ್ರಕ್ಕೆ ಗೀತ ಸಾಹಿತ್ಯ ಪೂರೈಸಿದೆ ಶ್ರೇಷ್ಠರನ್ನು ನೆನೆಯುವುದು - ಸತ್ಕರಿಸುವುದು ತನ್ನ ಕರ್ತವ್ಯ ಎಂಬುದು ಉಪಾಸನ ನಂಬಿಕೆ. ಹೀಗಾಗೇ ಈ ಸಮಾರಂಭದಲ್ಲೂ ಕವಿಶ್ರೇಷ್ಠರನ್ನು ಆದರದಿಂದ ಸತ್ಕರಿಸುತ್ತಿದೆ. ಈಗಾಗಲೇ ‘ಭರವಸೆಯ ಕುಡಿಗಳು’, ‘ನಾಳಿನ ಗೀತೆಗಳು’, ‘ನಿಮಗಾಗೆ ಈ ಹಾಡುಗಳು’, ‘ಬಾಬಾ ಓ ಬೆಳಕೆ’, ‘ಬಾ ಭೃಂಗವೇ ಬಾ’, ‘ಹೊಸ ಹಾಡು, ಹೊಸ ಹಾದಿ’, ‘ಚಿಗುರು ಚೈತ್ರ’, ‘ಪ್ರೇಮದ ಚಿಟಿಕೆ’ ಮೊದಲಾದ 24ಧ್ವನಿಸುರುಳಿಗಳನ್ನು ಹೊರತಂದಿರುವ ಮೋಹನ್ ಅವರ 25ನೇ ಧ್ವನಿಸುರುಳಿ ಶ್ರೋತೃಗಳಲ್ಲಿ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಉಪಾಸನಾ ಸಂಸ್ಥೆ ಪ್ರತಿವರ್ಷ ನಾಡಿನ ಯುವ ಸುಗಮ ಸಂಗೀತಗಾರರಿಗೆ ಜಿ.ವಿ. ಅತ್ರಿ ನೆನಪಿನಲ್ಲಿ ಪ್ರಶಸ್ತಿ ನೀಡಿ ಹುರಿದುಂಬಿಸುತ್ತಿದೆ. ಅರ್ಚನಾ ಉಡುಪ, ಎಂ.ಡಿ.ಪಲ್ಲವಿ, ಪ್ರವೀಣ್ ಡಿ ರಾವ್, ಪಂಚಮ್ ಹಳಿಬಂಡಿ, ನರಹರಿ ದೀಕ್ಷಿತ್ ಮೊದಲಾದ ಯುವ ಸಾಧಕರಿಗೆ ಪ್ರಶಸ್ತಿ ನೀಡಿ ಉಪಾಸನಾ ಅವರನ್ನು ಹುರಿದುಂಬಿಸಿದೆ. ಕೇವಲ ತನ್ನ ಕಾರ್ಯಕ್ಷೇತ್ರವನ್ನು ಸಂಗೀತಕ್ಕಷ್ಟೇ ಸೀಮಿತವಾಗಿಸಿಕೊಳ್ಳದ ಉಪಾಸನಾ ಕಡಲಾಚೆಯ ಕನ್ನಡಿಗರ ಹಲವು ಕನ್ನಡ ಪುಸ್ತಕಗಳ ಬಿಡುಗಡೆ ಸಮಾರಂಭದ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿರ್ವಹಿಸಿದೆ. ಚಂದ್ರಶೇಖರ್ ಅವರ ಭಾರತದ ಬೃಹತ್ ಬೇಲಿ, ವೈ.ಆರ್. ಮೋಹನ್ ಅವರ ಅಮೆರಿಕಾಯಣ ಕೃತಿಗಳ ಬಿಡುಗಡೆ ಸಮಾರಂಭವನ್ನು ಅಚ್ಚುಕಟ್ಟಾಗಿ ನಡೆಸಿದ ಕೀರ್ತಿಯೂ ಉಪಾಸನಾಕ್ಕೆ ಸಲ್ಲುತ್ತದೆ.
ತಾನೊಬ್ಬ ಬೆಳೆದರೇ ಸಾಕೆಂದು ಬಯಸುವ ಸ್ವಾರ್ಥಿಗಳ ಈ ಜಗತ್ತಿನಲ್ಲಿ ಅಪರೂಪದ ವ್ಯಕ್ತಿಯಾಗಿ ಕಾಣುವ ಉಪಾಸನಾ ಮೋಹನ್, ತಮ್ಮೊಂದಿಗೆ ಯುವ ಗಾಯನ ಪ್ರತಿಭೆಗಳಿಗೆ ತಿಂಗಳಿಗೊಂದು ವೇದಿಕೆ ಕಲ್ಪಿಸುತ್ತಾ ಅವರ ವಿಕಾಸಕ್ಕೂ ಕಾರಣರಾಗಿದ್ದಾರೆ. ಎಲ್ಲರೊಳಗೊಂದಾಗಿ ಬೆಳೆಯುತ್ತಿರುವ, ಇತರರ ಪ್ರತಿಭೆಯ ಪ್ರಕಾಶಕ್ಕೂ ಶ್ರಮಿಸುತ್ತಿರುವ ಉಪಾಸನಾ, ಯುವ ಹಾಗೂ ಪ್ರತಿಭಾವಂತ ಗಾಯಕರ ಪಾಲಿನ ಆಶಾಕಿರಣವಾಗಿದೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ರಾಗ ಸಂಯೋಜಕರಾಗಿ ಜನಮನ ಗೆದ್ದಿರುವ ಮೋಹನ್ ಬೆಂಗಳೂರಿನ ಸಂಗೀತ ಪ್ರಿಯರಿಗೆ ಉಪಸನಾ ಮೋಹನ್ ಎಂದೇ ಖ್ಯಾತರಾಗಿದ್ದಾರೆ. ಓದಿದ್ದು ರೇಡಿಯೋ ಟಿವಿ ಡಿಪ್ಲೋಮಾ ಆದರೂ, ಎದೆಯೊಳಗೆ ಸಂಸ್ಕಾರದತ್ತವಾಗಿ ಅಡಗಿಸಿಕೊಂಡಿದ್ದ ಸಂಗೀತವನ್ನೇ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡಿರುವ ಮೋಹನ್ ಚಿಕ್ಕವಯಸ್ಸಿನಲ್ಲೇ ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಸುಗಮ ಸಂಗೀತ ಬೆಳೆಯಲಿ, ಉಪಸನಾದ ಸಂಗೀತೋಪಾಸನೆ ನಿರಂತರವಾಗಿ ಸಾಗಲಿ ಎಂಬುದು ಕನ್ನಡರತ್ನ ಹಾರೈಕೆ. ವಿಳಾಸ: ಜೆ. ಮೋಹನ್, ಉಪಾಸನಾ ಸಂಗೀತ ಶಾಲೆ, ೧೪೬, ೩ನೇ ಮಹಡಿ, ಡಿವಿಜಿ ರಸ್ತೆ, ಬಸವನಗುಡಿ, ಬೆಂಗಳೂರು. ದೂರವಾಣಿ - 9845338363. | |||