ಮುಖಪುಟ /ಲೇಖನಮಾಲೆ 
 

ಸುಖಿರಾಜ್ಯ ಕೃಷ್ಣಪ್ಪನವರು ನೂರ್ಕಾಲ ಸುಖವಾಗಿರಲಿ..

95ರ ಕಿತ್ತಾನೆ ಕೃಷ್ಣಪ್ಪನವರಿಗೆ ಕುಟುಂಬದ ಗೌರವ

Kittane Krishnappa, D.C.P. Eshwar Prasad IPS, ಕಿತ್ತಾನೆ ಕೃಷ್ಣಪ್ಪ, ಈಶ್ವರ ಪ್ರಸಾದ್, ಡಿ.ಸಿ.ಪಿ.ನಿಜಕ್ಕೂ ಅದೊಂದು ಅಪರೂಪದ ಕಾರ್ಯಕ್ರಮಹೆತ್ತು ಹೊತ್ತು ಸಾಕಿ, ಸಲಹಿದವರನ್ನೇ ಹೊರೆ ಎಂದು ತಿಳಿವ ಮಕ್ಕಳು ತಮ್ಮ ವೃದ್ಧ ತಂದೆ -ತಾಯಿಯನ್ನು ವೃದ್ಧಾಶ್ರಮಗಳಿಗೋ, ಅನಾಥಾಶ್ರಮಗಳಿಗೋ ಅಟ್ಟುತ್ತಿರುವ ಈ ಕಾಲದಲ್ಲಿ, ೯೫ ವಸಂತಗಳನ್ನು ಕಂಡ ತಮ್ಮ ತಂದೆಗೆ ಮಕ್ಕಳು, ಮೊಮ್ಮಕ್ಕಳು ಹಾಗೂ ಬಂಧು ಬಾಂಧವರೊಂದಿಗೆ ಸೇರಿ ಆತ್ಮೀಯವಾಗಿ ಅಭಿನಂದಿಸಿದ ಮಧುರ ಕ್ಷಣವದು.

ಈ ಕಾರ್ಯಕ್ರಮ ನಡೆದಿದ್ದು ಜುಲೈ ೬ರ ಭಾನುವಾರ. ಬೆಂಗಳೂರಿನ ಮೌರ್ಯ ಹೋಟೆಲ್‌ನಲ್ಲಿ.

ಗಣ್ಯ ವ್ಯಕ್ತಿಗಳ ಭದ್ರತೆ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿರುವ (ಡಿಸಿಪಿ) ಕೆ.ಈಶ್ವರ ಪ್ರಸಾದ್ ತಮ್ಮ ತಂದೆ ಪತ್ರಕರ್ತ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕಿತ್ತಾನೆ ಕೃಷ್ಣಪ್ಪನವರ ೯೫ನೇ ಹುಟ್ಟುಹಬ್ಬವನ್ನು ವಿನೂತನವಾಗಿ ಏರ್ಪಡಿಸಿದ್ದರು.

ಕುಟುಂಬದ ಸದಸ್ಯರು, ಸೋದರ ಸಂಬಂಧಿಗಳು ಹಾಗೂ ಕೆಲವೇ ಆಪ್ತ ಮಿತ್ರರಿಗಷ್ಟೇ ಆಹ್ವಾನವಿದ್ದ ಸಂಪೂರ್ಣ ಖಾಸಗಿ ಕಾರ್ಯಕ್ರಮ ಆದ್ಯಂತವಾಗಿ ವಿಶೇಷತೆಗಳಿಂದ ಕೂಡಿತ್ತು.

ಸ್ವಾತಂತ್ರ್ಯಯೋಧರಾದ ಕೃಷ್ಣಪ್ಪನವರಿಂದ  ರೇಸ್‌ಕೋರ್ಸ್ ರಸ್ತೆಯಲ್ಲಿರುವ ಮಹಾತ್ಮಾಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿಸುವುದರೊಂದಿಗೆ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ತಾವೇ ಹಿರಿಯ ಪೊಲೀಸ್ ಅಧಿಕಾರಿಯಾದರೂ ಸಾರ್ವಜನಿಕ ಸ್ಥಳದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಸ್ಥಳೀಯ ಪೊಲೀಸರಿಂದ ಅಧಿಕೃತ ಮತ್ತು ಲಿಖಿತ ಅನುಮತಿ ಪಡೆಯುವ ಮೂಲಕ ಈಶ್ವರ ಪ್ರಸಾದ್ ನೆಲದ ಕಾನೂನು ಗೌರವಿಸಿದ್ದು ಮತ್ತೊಂದು ವಿಶೇಷವಾಗಿತ್ತು.

ನಂತರ ಮೌರ್ಯ ಹೋಟೆಲ್‌ನಲ್ಲಿ ವೇದಘೋಷಗಳೊಂದಿಗೆ ಕೃಷ್ಣಪ್ಪನವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತುಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಲದೇವಿ ಬನಶಂಕರಿಯ ಪೂಜೆಯ ಬಳಿಕ ಹೊಸಚಿಗುರು ಹಳೆಬೇರು ಎಂಬಂತೆ ಸಂಪ್ರದಾಯಕ್ಕೆ ಆಧುನಿಕತೆಯ ಸ್ಪರ್ಶ. ಕೃಷ್ಣಪ್ಪ ನವರು ವಿದ್ಯುತ್ ಗುಂಡಿ ಒತ್ತುತ್ತಿದ್ದಂತೆ ಪಿರಮಿಡ್ ಮಾದರಿಯಲ್ಲಿ ರಚಿಸಲಾಗಿದ್ದ ೯೫ ಹಣತೆಯ ಚಿತ್ರಕ್ಕೆ ಅಳವಡಿಸಿದ್ದ ಎಲ್..ಡಿ. ಬಲ್ಬ್‌ಗಳು  ಪ್ರಜ್ವಲಿಸಿದವು. ಕಾರ್ಯಕ್ರಮ ನಿರೂಪಣೆ ಮಾಡಿದ ರಮೇಶ್ ಹುಟ್ಟಿದ ಹಬ್ಬದ ದಿನ ದೀಪವನ್ನು ನಂದಿಸುವುದು ಪಾಶ್ಚಾತ್ಯ ಸಂಸ್ಕೃತಿ, ದೀಪ ಬೆಳಗಿಸಿ, ಮುಂಬಾಳು ಹಸನಾಗಿರಲಿ ಎಂದು ಹಾರೈಸುವುದು ಭಾರತೀಯ ಸಂಸ್ಕೃತಿ ಎಂದಾಗ ಎಲ್ಲರಿಂದ ಮೆಚ್ಚುಗೆಯ ಕರತಾಡನ.

ಶ್ರೀ ಕಿತ್ತಾನೆ ಕೃಷ್ಣಪ್ಪ ಹಾಗೂ ಅವರ ಪುತ್ರ ಐ.ಪಿ.ಎಸ್. ಅಧಿಕಾರಿ ಈಶ್ವರ ಪ್ರಸಾದ್ ಅವರೊಂದಿಗೆ ಕನ್ನಡರತ್ನ.ಕಾಂ ಸಂಪಾದಕ ಟಿ.ಎಂ. ಸತೀಶ್ಕೃಷ್ಣಪ್ಪನವರ ಬದುಕು, ಬರಹ, ಸಾಧನೆಯ ಪರಿಚಯದೊಂದಿಗೆ ಮಕ್ಕಳು, ಮೊಮ್ಮಕ್ಕಳು, ಸೋದರರ ಮಕ್ಕಳು, ಮೊಮ್ಮಕ್ಕಳು ಒಗ್ಗೂಡಿ ಪರಿಶ್ರಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ ಕ್ಷಣವಂತೂ ಅವಿಸ್ಮರಣೀಯ. ೯೫ರ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಂತಿರುವ ಕೃಷ್ಣಪ್ಪನವರು ಸಮಾರಂಭಕ್ಕೆ ಬಂದ ಎಲ್ಲರನ್ನೂ ಹೆಸರು ಹಿಡಿದು ಮಾತನಾಡಿಸಿ, ಪರಿಚಯಿಸುತ್ತಿದ್ದ ರೀತಿ, ತಮ್ಮ ಬದುಕಿನ ಮರೆಯಲಾಗದ ಸನ್ನಿವೇಶಗಳನ್ನು ಸ್ಮರಿಸಿಕೊಂಡ ಪರಿ ನೋಡಿದಾಗ ಅವರ ಅಸಾಧಾರಣ ಸ್ಮರಣ ಶಕ್ತಿಗೆ ಎಲ್ಲರೂ ತಲೆದೂಗಿದರು.

೧೯೫೨ರಲ್ಲೇ ಜನಮನ ದಿನಪತ್ರಿಕೆ ಆರಂಭಿಸಿ ಅಖಂಡ ಕರ್ನಾಟಕದ ಕನಸು ಸಾಕಾರಗೊಳಿಸಲು ಹೋರಾಟ ನಡೆಸಿದ ಹಾಗೂ ೧೯೮೨ರಲ್ಲಿ ಆರಂಭಿಸಿದ  ಸುಖಿರಾಜ್ಯ ವಾರಪತ್ರಿಕೆಯನ್ನು ೩ದಶಕಗಳಿಂದ ನಡೆಸಿಕೊಂಡು ಬಂದಿರುವ ಕೃಷ್ಣಪ್ಪ ಅವರು ೧೯೩೫ರಲ್ಲಿ ಮೈಸೂರಿನ ದಳವಾಯಿ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರೂ ಸರ್ಕಾರದಿಂದ ದೊರಕುವ ಪಿಂಚಣಿ ಮತ್ತಿತರ ಯಾವುದೇ ಸೌಲಭ್ಯ ಪಡೆದಿಲ್ಲ. ಭಾರತಾಂಬೆಗೆ ಮಾಡಿದ ಸೇವೆಗೆ ಸರ್ಕಾರದ ಸವಲತ್ತು ಪಡೆಯಬಾರದು ಎನ್ನುವುದು ಇವರ ವಾದ.

ತಿನ್ನುವ ಆಹಾರ, ಸೇವಿಸುವ ಗಾಳಿಯೂ ವಿಷವಾಗುತ್ತಿರುವ ಈ ಸಮಾಜದಲ್ಲಿ ನಾವಂತೂ ೯೫ ವರ್ಷಗಳ ಬದುಕನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ೯೫ ವರ್ಷಗಳ ಸಾರ್ಥಕ ಬಾಳ್ವೆ ಮಾಡಿರುವ ಕೃಷ್ಣಪ್ಪನವರು ನೂರ್ಕಾಲ ಬಾಳಲಿ, ತಂದೆ-ತಾಯಿಯನ್ನು ಅಕ್ಕರೆಯಿಂದ ನೋಡಿಕೊಳ್ಳುವ ಮಕ್ಕಳ ಸಂಖ್ಯೆಯೂ ಸಾವಿರವಾಗಲಿ ಎಂಬುದು ನಮ್ಮ ಹಾರೈಕೆ.

ಮುಖಪುಟ /ಲೇಖನಮಾಲೆ