|
ವರ್ಷದ ಮೊದಲ ಹಬ್ಬ ಯುಗಾದಿಯೂ, ಅದರ ಆಚರಣೆಯೂ ಅಭ್ಯಂಜನ ಮಾಡಿ, ಹೊಸಬಟ್ಟೆ ತೊಟ್ಟು, ಬೇವು ಬೆಲ್ಲ ತಿಂದು, ಹೋಳಿಗೆ ಊಟ ಮಾಡಿ ಸಂಭ್ರಮಿಸುವ ವರ್ಷಾವ ಹಬ್ಬವೇ ಯುಗಾದಿ... ಈ ಬಾರಿ ಮಾರ್ಚ್ 16ರಂದು ವರ್ಷದ ಮೊದಲ ಹಬ್ಬ *ಟಿ.ಎಂ.ಸತೀಶ್
ಯುಗಾದಿ ಅತಿ ದೊಡ್ಡ ಹಬ್ಬ. ಗುಜರಾತ್- ರಾಜಸ್ಥಾನದ ಕೆಲವು ಭಾಗಗಳನ್ನು ಹೊರತುಪಡಿಸಿ ಇತರ ಕಡೆಗಳಲ್ಲಿ ಚೈತ್ರಮಾಸದಿಂದ ಹಿಂದೂ ಸಂವತ್ಸರದ ಹೊಸವರ್ಷಾಚರಣೆ ನಡೆದು ಬಂದಿದೆ. ಉತ್ತರ ಕನ್ನಡ- ದಕ್ಷಿಣ ಕನ್ನಡದ ಕೆಲವು ಭಾಗ, ಕೇರಳ, ತಮಿಳುನಾಡುಗಳಲ್ಲಿ ಸೌರಮಾನದ ರೀತ್ಯ ಯುಗಾದಿ ಆಚರಿಸುತ್ತಾರೆ. ಚಾಂದ್ರಮಾನ ಯುಗಾದಿಯನ್ನು ಚಂದ್ರಾಚಾರದಿಂದಲೂ, ಸೌರಮಾನ ಯುಗಾದಿಯನ್ನು ಸೂರ್ಯ ಭಗವಾನನು ಮೇಷ ರಾಶಿಯನ್ನು ಪ್ರವೇಶಿಸುವ ದಿನದಿಂದ ಆಚರಿಸುತ್ತಾರೆ. ಈ ಬಾರಿಯ (2010) ಚಾಂದ್ರಮಾನ ಯುಗಾದಿ ಮಾರ್ಚ್ 16ರಂದು. ಹಿಂದೂಗಳು ಯುಗಾದಿಯ ದಿನದಂದು ಎಣೆ ಒತ್ತಿಕೊಂಡು ಸ್ನಾನ ಮಾಡುತ್ತಾರೆ. ದೇವರ ಪೂಜೆ ಮಾಡುತ್ತಾರೆ. ಹೊಸ ಬಟ್ಟೆ ತೊಟ್ಟು ದೇವಾಲಯಗಳಿಗೆ ಹೋಗಿ ಬರುತ್ತಾರೆ.
ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ,
ಆಚರಣೆ : ಗೌರಿ, ಗಣೇಶ, ದೀಪಾವಳಿ ಮತ್ತಿತರ ಹಬ್ಬಗಳಿಗಿರುವಂತೆ ಯುಗಾದಿಯಂದು ಹೆಚ್ಚಿನ ವಿಶೇಷ ಆಚರಣೆಗಳಿಲ್ಲವಾದರೂ, ಸಾಮಾನ್ಯ ಜನರು ಆ ದಿನ ಉಷಾಕಾಲದಲ್ಲಿ ಪರಮಾತ್ಮನ ಸ್ಮರಿಸುತ್ತಾ ಹಾಸಿಗೆಯಿಂದೆದ್ದು, ನಿತ್ಯಕರ್ಮ ಮುಗಿಸಿ, ಮನೆಯ ಮುಖ್ಯದ್ವಾರ ಹಾಗೂ ದೇವರ ಮನೆಯ ದ್ವಾರವನ್ನು ಮಾವಿನ ತಳಿರಿನ ತೋರಣದಿಂದ ಅಲಂಕರಿಸಿ, ಮನೆಯ ಮುಂದೆ ಬಣ್ಣಬಣ್ಣದ ರಂಗೋಲಿ ಬಿಟ್ಟು, ಅಭ್ಯಂಜನಸ್ನಾನ ಮಾಡಿ, ದೇವತಾರ್ಚನೆ ಮಾಡಿ, ಬೇವು ಬೆಲ್ಲ ತಿಂದು, ಹೊಸಬಟ್ಟೆ ತೊಟ್ಟು, ಪರಸ್ಪರ ಶುಭಾಶಯ ಕೋರಿ, ದೇವಾಲಯಗಳಿಗೆ ಹೋಗಿ ಬಂದು, ಸಿಹಿಯೂಟ ಮಾಡುವಲ್ಲಿಗೆ ಯುಗಾದಿ ಹಬ್ಬ ಮುಗಿದಂತೆ. ಆದರೆ, ಹಳ್ಳಿಗಳಲ್ಲಿ, ಇನ್ನೂ ಸಂಪ್ರದಾಯ - ಆಚರಣೆ ಉಳಿಸಿಕೊಂಡಿರುವ ಅಗ್ರಹಾರಗಳಲ್ಲಿ, ಪುರೋಹಿತರು, ಪಂಡಿತರು ಯುಗಾದಿಯಂದು ಸ್ನಾನ ಸಂಧ್ಯಾದಿ ಮುಗಿದ ಬಳಿಕ, ಕುಲದೇವರನ್ನೂ, ಪಂಚಾಗವನ್ನೂ ಪೂಜಿಸಿ, ಅಗಲ ಬಾಯಿಯ ಪಾತ್ರೆಯಲ್ಲಿ ತುಪ್ಪ ಹಾಕಿ ಮನೆಮಂದಿಯೆಲ್ಲ ಅದರಲ್ಲಿ ಮುಖ ನೋಡಿಕೊಳ್ಳುತ್ತಾರೆ. ಆನಂತರ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾರೆ. (ಹೀಗೆ ಮಾಡುವುದರಿಂದ ಸರ್ವದೋಷ ಪರಿಹಾರ ಆಗತ್ತೆ ಎಂಬುದು ನಂಬಿಕೆ.) ಸಂಜೆ ಊರಿನ ಅರಳಿ ಕಟ್ಟೆಯಲ್ಲಿ ಸೇರಿ, ಪಂಡಿತರು ಊರಿನ ಜನಕ್ಕೆ ಪಂಚಾಂಗ ಓದಿ ಹೇಳುತ್ತಾರೆ. ವರ್ಷಫಲ ಕೇಳುವ ಸಂಪ್ರದಾಯ ಹಳ್ಳಿಗಳ ಕಡೆ ಇನ್ನೂ ಜೀವಂತವಾಗಿದೆ. ಕಾಲ ದೇಶ ಪರಿಸರಕ್ಕನುಗುಣವಾಗಿ ಕರ್ನಾಟಕದ ಕೆಲವು ಭಾಗಗಳಲ್ಲಿ ಯುಗಾದಿಯ ದಿನ ಜೂಜಾಡುವುದೂ ಒಂದು ಸಂಪ್ರದಾಯವಾಗಿ ಬೆಳೆದುಬಿಟ್ಟಿದೆ. ಯುಗಾದಿಯ ಮಾರನೇ ದಿನವನ್ನು ವರ್ಷತೊಡಕು ಎಂದೂ ಆಚರಿಸುತ್ತಾರೆ. ಅಂದು ಮಾಂಸಾಹಾರಿಗಳು ಕಡ್ಡಾಯವಾಗಿ ಮಾಂಸದ ಊಟ ಮಾಡುತ್ತಾರೆ. ಮದ್ಯ ಸೇವನೆಯೂ ಈ ವರ್ಷತೊಡಗಿನ ಆಚರಣೆಗಳಲ್ಲೊಂದು. | |||