ಜನರನ್ನೇ ದೇವರೆಂದ ನಟಸಾರ್ವಭೌಮ : ಡಾ.ರಾಜ್ * ಟಿ.ಎಂ.ಸತೀಶ್
ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾದ ಮೇರು ನಟ. ವರನಟ, ನಟ ಸಾಮ್ರಾಟ, ಕನ್ನಡ ಚಿತ್ರರಸಿಕರ ಹೃದಯ ಸಿಂಹಾಸನಾಶ್ವರ. ತಮ್ಮ ಅಭಿಮಾನಿಗಳನ್ನೇ ದೇವರೆಂದು ತಿಳಿದ ರಾಜ್ ಸರಳತೆಯ ಸಾಕಾರಮೂರ್ತಿ. ವ್ಯಕ್ತಿಯಾಗಿ, ನಟರಾಗಿ ರಾಜ್ ಈ ನಾಡಿಗೆ ನೀಡಿರುವ ಕೊಡುಗೆ ಅಪಾರ. ಎವಿಎಂ ಲಾಂಛನದಲ್ಲಿ 1954ರಲ್ಲಿ ತೆರೆಕಂಡ ‘ಬೇಡರ ಕಣ್ಣಪ್ಪ’ ಮೂಲಕ ನಾಯಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ರಾಜ್, ನಾಯಕಿ ಪ್ರಧಾನವಾಗಿದ್ದ ಕನ್ನಡ ಚಿತ್ರರಂಗದಲ್ಲಿ ನಾಯಕ ಪ್ರಧಾನ ಶಕೆ ಆರಂಭಿಸಿದವರು.
ಮುತ್ತುರಾಜ: ರಾಜ್ಕುಮಾರ್ ಹುಟ್ಟಿದ್ದು 1931ರ ಏಪ್ರಿಲ್ 24ರಂದು. ಹುಟ್ಟೂರು ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರು. ತಂದೆ ರಂಗಭೂಮಿ ನಟ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ, ತಾಯಿ ಲಕ್ಷ್ಮಮ್ಮ. ಮುತ್ತತ್ತಿ ಕ್ಷೇತ್ರದ ಮುತ್ತುರಾಯನ ವರಪ್ರಸಾದದಿಂದ ಜನಿಸಿದ ರಾಜ್ರಿಗೆ ತಂದೆ ತಾಯಿ ಇಟ್ಟ ಹೆಸರು ‘ಮುತ್ತುರಾಜ್’. ರಾಜ್ ಓದಿದ್ದು 3ನೇ ತರಗತಿವರೆಗೆ ಮಾತ್ರ. ಆದರೆ, ಸಾಂಪ್ರದಾಯಿಕ ಶಿಕ್ಷಣದ ಹೊರತಾಗಿಯೂ ರಾಜ್ ಕಲಿತದ್ದು, ಸಾಧಿಸಿದ್ದು ಅಪಾರ. ದಾರಿತಪ್ಪಿದ ಮಗ ಚಿತ್ರದಲ್ಲಿ ಉಪನ್ಯಾಸಕನ ಪಾತ್ರ ನಿರ್ವಹಿಸಿದ ರಾಜ್ ಅವರ ಇಂಗ್ಲಿಷ್ ಉಚ್ಚಾರಣೆ ಅತ್ಯುತ್ಕೃಷ್ಟವಾಗಿತ್ತು. ಇಂಗ್ಲಿಷ್ ಉಪನ್ಯಾಸಕರೇ ರಾಜ್ ಅವರನ್ನು ನೋಡಿ ಕಲಿಯುವಂತಿತ್ತು.
ಮೊದಮೊದಲು ಬಾಲನಟನ ಪಾತ್ರ, ಸಖಿ, ಸೈನಿಕ, ಸ್ತ್ರೀವೇಷ ಹಾಕುತ್ತಿದ್ದ ರಾಜ್, ಕುರುಕ್ಷೇತ್ರ ನಾಟಕದಲ್ಲಿ ಅಭಿಮನ್ಯುವಿನ ಪಾತ್ರದೊಂದಿಗೆ ನಾಯಕರಾದರು. ರಾಜ್ರ ಮೊದಲ ಚಿತ್ರ: ರಾಜ್ ಕುಮಾರ್ ವಾಸ್ತವವಾಗಿ ಚಿತ್ರರಂಗ ಪ್ರವೇಶಿಸಿದ್ದು 1942ರಲ್ಲಿ. ಅದೂ ಬಾಲನಟನಾಗಿ. ಕಲೈವಾಣಿ ಫಿಲಂಸ್ ಅವರು ನಿರ್ಮಿಸಿದ ‘ಭಕ್ತಪ್ರಹ್ಲಾದ’ ರಾಜ್ ಅಭಿನಯದ ಮೊದಲ ಚಿತ್ರ. ಆದರೆ, ಅವರು ನಾಯಕರಾಗಿ ಅಭಿನಯಿಸಿದ ಪ್ರಥಮ ಚಿತ್ರ ಬೇಡರಕಣ್ಣಪ್ಪ. ಈ ಚಿತ್ರದಲ್ಲಿ ನಿರ್ದೇಶಕ ಎಚ್.ಎಲ್.ಎನ್. ಸಿಂಹ ಮುತ್ತುರಾಜ್ರಿಗೆ ರಾಜ್ಕುಮಾರ್ ಎಂದು ನಾಮಕರಣ ಮಾಡಿದರು.
ರಾಯರಸೊಸೆ (1957) ಚಿತ್ರದ ಮೂಲಕ ಸಾಮಾಜಿಕ ಚಿತ್ರಗಳಲ್ಲಿಯೂ ನಟಿಸಲು ಆರಂಭಿಸಿದ ರಾಜ್, ಸಾಮಾಜಿಕ, ಜಾನಪದ, ಐತಿಹಾಸಿಕ ಪಾತ್ರಗಳಲ್ಲಿಯೂ ಸೈ ಎನಿಸಿಕೊಂಡರು. ತಮ್ಮ ಅಭಿನಯ ಕೌಶಲ ಮೆರೆದರು. ರಾಯರ ಸೊಸೆಯ ಯಶಸ್ಸಿನ ಬಳಿಕ, ಕರುಣೆಯೇ ಕುಟುಂಬದ ಕಣ್ಣು, ನಾಂದಿ, ನಂದಾದೀಪ, ಸಾಕುಮಗಳು, ಗೌರಿ, ಕುಲವಧು, ಸಂಧ್ಯಾರಾಗ, ಚಂದವಳ್ಳಿಯ ತೋಟ, ತೂಗುದೀಪ, ಚಕ್ರತೀರ್ಥ, ಗಾಂಧಿನಗರ, ಕಸ್ತೂರಿನಿವಾಸ, ಸರ್ವಮಂಗಳ, ಮಾರ್ಗದರ್ಶಿ, ಉಯ್ಯಾಲೆ, ಕರುಳಿನ ಕರೆ, ಕುಲಗೌರವ, ಸಿಪಾಯಿ ರಾಮು, ಬಂಗಾರದ ಮನುಷ್ಯ, ಬಿಡುಗಡೆ, ಸ್ವಯಂವರ, ಆಶಾಸುಂದರಿ, ದೂರದ ಬೆಟ್ಟ, ಗಂಗೆಗೌರಿ, ರಾಜದುರ್ಗದ ರಹಸ್ಯ, ಕಠಾರಿವೀರ, ಕಂಠೀರವ, ಮಧುಮಾಲತಿ, ಭಾಗ್ಯದೇವತೆ, ಜಗಮೆಚ್ಚಿದ ಮಗ, ತಾಯಿಗೆ ತಕ್ಕಮಗ, ದಾರಿತಪ್ಪಿದ ಮಗ, ಶಂಕರ್ಗುರು, ಬಹದ್ದೂರು ಗಂಡು, ಮಯೂರ, ಗಂಧದಗುಡಿ, ಭಾಗ್ಯವಂತರು, ಹುಲಿಯ ಹಾಲಿನ ಮೇವು, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣದೇವರಾಯ, ಚಲಿಸುವ ಮೋಡಗಳು, ಭಾಗ್ಯಾದ ಲಕ್ಷ್ಮೀ ಬಾರಮ್ಮ, ದೇವತಾ ಮನುಷ್ಯ, ಆಕಸ್ಮಿಕ, ಜೀವನಚೈತ್ರ, ಶಬ್ದವೇ ಮೊದಲಾದ ಚಿತ್ರಗಳಲ್ಲಿ ವಿವಿಧ ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದರು.
ಗೋವಾದಲ್ಲಿ ಸಿಐಡಿ 999, ಆಪರೇಷನ್ ಡೈಮೆಂಡ್ ರಾಕೇಟ್, ಆಪರೇಷನ್ ಜಾಕ್ಪಾಟ್ ಮೊದಲಾದ ಚಿತ್ರಗಳಲ್ಲಿ ಜೇಮ್ಸ್ಬಾಂಡ್ರನ್ನೂ ಮೀರಿಸಿದ ರಾಜ್ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ದ್ವಿಪಾತ್ರ, ತ್ರಿಪಾತ್ರಾಭಿನಯಗಳಲ್ಲೂ ರಾಜ್ ಮೆರೆದಿದ್ದಾರೆ. ಸತಿಶಕ್ತಿ, ಬಬ್ರುವಾಹನ ಚಿತ್ರಗಳಲ್ಲಿ ದ್ವಿಪಾತ್ರಾಭಿನಯ ಮಾಡಿದ ರಾಜ್, ಕುಲಗೌರವ, ಶಂಕರ್ಗುರು ಚಿತ್ರಗಳಲ್ಲಿ ತ್ರಿಪಾತ್ರ ನಿರ್ವಹಿಸಿ ಜನಮನ ಸೂರೆಗೊಂಡರು.
ಗಾಯಕ : ತಂದೆಯಿಂದ ಹಾಡುವುದನ್ನು ಕಲಿತ ರಾಜ್ ಮೊಟ್ಟಮೊದಲು ಹಾಡಿದ್ದು, ಮಹಿಷಾಸುರ ಮರ್ದಿನಿ ಚಿತ್ರದಲ್ಲಿ. ಆದರೆ, ಸಂಪತ್ತಿಗೆ ಸವಾಲಿನ ಯಾರೇ ಕೂಗಾಡಲಿ, ಊರೆ ಹೋರಾಡಲಿ ಗೀತೆಯ ಗಾಯನದಿಂದ ರಾಜ್ ಖ್ಯಾತ ಹಿನ್ನೆಲೆ ಗಾಯಕರೂ ಆದರು. ತಮ್ಮ ಅಭಿನಯದ ಹಲವಾರು ಚಿತ್ರಗಳಲ್ಲಿ ನೂರಾರು ಗೀತೆಗಳನ್ನು ಹಾಡಿರುವ ರಾಜ್, ಇತರ ನಾಯಕರ ಚಿತ್ರಗಳಲ್ಲೂ ಹಾಡಿದ್ದಾರೆ. ರಾಜ್ ಗಾಯನದ ನೂರಾರು ಭಕ್ತಿಗೀತೆಗಳ ಧ್ವನಿಸುರುಳಿಗಳೂ ಜನಪ್ರಿಯವಾಗಿವೆ. ಕಾಡುಗಳ್ಳ ವೀರಪ್ಪನ್ ರಾಜ್ರನ್ನು ಅಪಹರಿಸಿ 108ದಿನಗಳ ಕಾಲ ಒತ್ತೆಯಾಳು ಮಾಡಿಕೊಂಡ ಸಂದರ್ಭದಲ್ಲಿ ವರನಟ ವನವಾಸ ಅನುಭವಿಸಿದ್ದು ಮಾತ್ರ ಇತಿಹಾಸದಲ್ಲೊಂದು ಕಪ್ಪುಚುಕ್ಕೆ. | |||