ಮುಖಪುಟ /ಸಿನಿಮಾ    

ದ್ವಾರಕೀಶ್ ಚಿತ್ರಕ್ಕೆ ವಿಷ್ಣುವರ್ಧನ್ ಹೆಸರು- ಭಾರತಿ ವಿರೋಧ

vishnuvardanಬೆಂಗಳೂರು : ನಿರ್ಮಾಪಕ ದ್ವಾರಕೀಶ್ ತಮ್ಮ ಹೊಸ ಚಿತ್ರಕ್ಕೆ ವಿಷ್ಣುವರ್ಧನ್ ಎಂದು ಹೆಸರಿಡಲು ನಿರ್ಧರಿಸಿರುವುದು ಈಗ ಹೊಸ ವಿವಾದ ಸೃಷ್ಟಿಸಿದೆ. ಸ್ವತಃ ಭಾರತಿ ವಿಷ್ಣುವರ್ಧನ್ ಅವರೇ, ತಮ್ಮ ದಿವಂಗತ ಪತಿಯ ಹೆಸರಿನಲ್ಲಿ ದ್ವಾರಕೀಶ್ ಚಿತ್ರ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ವಿಷ್ಣುವರ್ಧನ್ ಹೆಸರನ್ನು ಕ್ಯಾಷ್ ಮಾಡಿಕೊಳ್ಳುವ ವ್ಯಾಪಾರ ಬುದ್ಧಿಯನ್ನು ದ್ವಾರಕೀಶ್ ಪ್ರದರ್ಶಿಸುತ್ತಿದ್ದಾರೆ ಎಂದು ಭಾರತೀ ವಿಷ್ಣುವರ್ಧನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತಿ ಅವರು ವಿಷ್ಣುವರ್ಧನ್ ಹೆಸರಿನ ಸಿನಿಮಾ ಮಾಡಲು ವಿರೋಧಿಸುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ವಿಷ್ಣುವರ್ಧನ್ ಅವರ ಮನೆಯ ಮುಂದೆ ಸೇರಿ, ಭಾರತಿ ಅವರಿಗೆ ಬೇಡ ಎನ್ನುವುದಾದರೆ ತಮಗೂ ಆ ಚಿತ್ರ ಬೇಡ. ದ್ವಾರಕೀಶ್ ವಿಷ್ಣು ಹೆಸರಿನಲ್ಲಿ ಚಿತ್ರ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bharathiಜುಲೈ 1ರಂದು ಚಿತ್ರದ ಮುಹೂರ್ತ ನಡೆಯಲಿದೆ. ಸುದೀಪ್ ಅವರು ಈ ಚಿತ್ರದ ನಾಯಕರಾಗಿದ್ದಾರೆ, ಇನ್ನೂ ಚಿತ್ರಕ್ಕೆ ಹೆಸರಿಟ್ಟಿಲ್ಲ ಆದರೆ ವಿಷ್ಣುವರ್ಧನ್ ಎಂದು ಚಿತ್ರಕ್ಕೆ ಹೆಸರಿಡಲಾಗುವುದು ಎಂದು ದ್ವಾರಕೀಶ್ ಪ್ರಕಟಿಸಿದ್ದೇ ತಡ ಆಕ್ಷೇಪಗಳು ವ್ಯಕ್ತವಾಗಿವೆ.

ದ್ವಾರಕೀಶ್ ಸಮಜಾಯಿಷಿ: ವಿವಾದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಿರುವ ದ್ವಾರಕೀಶ್, ವಿಷ್ಣುವರ್ಧನ್ ಇಡೀ ಕರ್ನಾಟಕದ ಆಸ್ತಿ. ನಾನೂ ವಿಷ್ಣುವರ್ಧನ್ ಆಪ್ತ ಮಿತ್ರರು. ನಾವಿಬ್ಬರೂ ಹಲವು ಚಿತ್ರಗಳಲ್ಲಿ ನಟಿಸಿದ್ದೇವೆ. ನನ್ನ ಅಭಿಮಾನ ವ್ಯಕ್ತಪಡಿಸಲು ಈ ಚಿತ್ರ ಮಾಡುತ್ತಿದ್ದೇನೆ ಇದರಲ್ಲಿ ವ್ಯಾಪಾರೀ ಮನೋಭಾವ ಇಲ್ಲ ಎಂದು ಹೇಳಿದ್ದಾರೆ.

dwarakishಈ ಮಧ್ಯೆ ಭಾರತಿ ಅವರು ವಿಷ್ಣುವರ್ಧನ್ ಹೆಸರಿನಲ್ಲಿ ಚಿತ್ರ ನಿರ್ಮಿಸಲು ಟೈಟಲ್ ನೊಂದಣಿ ಮಾಡದಂತೆ ಪತ್ರ ನೀಡಿರುವ ಹಿನ್ನೆಲೆಯಲ್ಲಿ ಹಾಗೂ ನಿಯಮಾವಳಿಗಳ ರೀತ್ಯ ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ಅನುಮತಿ ಇಲ್ಲದೆ ಚಿತ್ರ ನಿರ್ಮಿಸುವುದು ಸಾಧ್ಯವಿಲ್ಲದ ಕಾರಣ, ನಾವು ಅನುಮತಿ ನೀಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ತಿಳಿಸಿದ್ದಾರೆ.

ಮುಖಪುಟ /ಸಿನಿಮಾ