ಡಾ.ಯು.ಆರ್. ಅನಂತಮೂರ್ತಿ ಎಂಬ ಆಲದಮರ * ಟಿ.ಎಂ.ಸತೀಶ್
ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಎಂದರೆ ಬಹುಮಂದಿ ಯಾರೆಂದು ಪ್ರಶ್ನಿಸುತ್ತಾರೆ. ಅದೇ ಡಾ.ಯು.ಆರ್. ಅನಂತಮೂರ್ತಿ ಎಂದರೆ ತಮ್ಮ ಆತ್ಮೀಯ, ಹಿತೈಶಿ, ಬಂಧು, ಗೆಳೆಯ ಎನ್ನುವಂತೆ ಓ ಅನಂತ ಮೂರ್ತಿ ಅವರೇ ನನಗೆ ಗೊತ್ತು ಬಿಡಿ ಎನ್ನುತ್ತಾರೆ. (ಮೂರ್ತಿ ಅವರನ್ನು ಒಪ್ಪದವರೂ ಕೆಲವರಿದ್ದಾರೆ) ಅನಂತಮೂರ್ತಿ ಅವರು ಬಹುಮುಖ ಪ್ರತಿಭೆಯ ಧೀಮಂತ ಲೇಖಕ. ಅತ್ಯುತ್ತಮ ಕಥೆಗಾರ, ಕಾದಂಬರಿಕಾರ, ವಿಮರ್ಶಕ, ಪತ್ರಕರ್ತ (ಋಜುವಾತು ತ್ರೈಮಾಸಿಕ) ಕವಿ. ಇತ್ತೀಚೆಗೆ ಎಂ.ಎಂ. ಕಲ್ಬುರ್ಗಿ ಅವರು ಭಾಷಣವೊಂದರಲ್ಲಿ ಅನಂತಮೂರ್ತಿ ಅವರು ದೇವರಿದ್ದಾನೆಯೇ ಎಂಬ ಸತ್ಯಾನ್ವೇಷಣೆಗೆ ತಮ್ಮ ಬಾಲ್ಯದಲ್ಲಿ ದೇವರೆಂದು ನಂಬುತ್ತಿದ್ದ ಶಿಲೆಯೊಂದರ ಮೇಲೆ ಮೂತ್ರ ಮಾಡಿದ್ದರೆಂಬ ಬಗ್ಗೆ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಅವರು ಈ ದೇಶದ ಪ್ರಧಾನಿ ಆದರೆ ತಾವು ಭಾರತದಲ್ಲಿ ಇರುವುದಿಲ್ಲ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದರು, ಮೋದಿ ಅವರು ಪ್ರಧಾನಿ ಆದಾಗ ಕೆಲವರು ಅವರಿಗೆ ಪಾಕಿಸ್ತಾನಕ್ಕೆ ತೆರಳುವಂತೆ ವಿಮಾನದ ಟಿಕೆಟ್ ಕೂಡ ಕಳಿಸಿದ್ದರು. ಈ ಎಲ್ಲ ಸಂಘರ್ಷಗಳ ನಡುವೆಯೂ ಅನಂತ ಮೂರ್ತಿ ಸ್ಥಿತಪ್ರಜ್ಞರಂತೆ ಇರುತ್ತಿದ್ದರು. ಪದ್ಮಭೂಷಣ, ಜ್ಞಾನಪೀಠ, ಮಾಸ್ತಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿಯೇ ಮೊದಲಾದ ಹಲವು ಹತ್ತು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಮೂರ್ತಿ ಅವರದು, ಆಕರ್ಷಕ ವ್ಯಕ್ತಿತ್ವ. ತುಮಕೂರಿನ ಸಾಹಿತ್ಯ ಸಮ್ಮೇಳನದಲ್ಲಿ ಅವರು ಹರಿಸಿದ ವಿಚಾರ ಧಾರೆ, ೨೫ ಪುಟಗಳ ವಿಚಾರಪೂರ್ಣ ಭಾಷಣ, ಕನ್ನಡ - ಕನ್ನಡಿಗರ ಬಗ್ಗೆ ಮೂರ್ತಿಯವರಿಗಿರುವ ಕಳಕಳಿಯನ್ನು ಬಿಂಬಿಸಿತ್ತು. ಸುಲಿದ ಬಾಳೆಯ ಹಣ್ಣಿನಂದದಿ... ಸರಳ ಸುಂದರ ಕನ್ನಡದಲ್ಲಿ ಕಂಚಿನ ಕಂಠದಿಂದ ಹೊರಹೊಮ್ಮಿದ್ದ ಆ ಅಸ್ಖಲಿತ ಭಾಷಣ ಮೂರ್ತಿಯವರು ಅಪ್ರತಿಮ ವಾಗ್ಮಿ ಎಂಬುದನ್ನು ನಿರೂಪಿಸಿದ್ದಲ್ಲದೆ, ಅವರ ವಿಚಾರಧಾರೆಗೆ ಹಿಡಿದ ಕೈಗನ್ನಡಿಯಾಗಿತ್ತು. ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬಗ್ಗೆ ಟೀಕೆ ಮಾಡಿದ್ದ ಟೀಕಾಕಾರರ ಬಾಯನ್ನೂ ಮುಚ್ಚಿಸಿತ್ತು. ಅನಂತ ಮೂರ್ತಿ ಕನ್ನಡ ಸಾರಸ್ವತ ಲೋಕದಲ್ಲಿ ಅತಿ ಎತ್ತರಕ್ಕೆ ಬೆಳೆದ ಬೃಹತ್ ಆಲದ ಮರದಂತಿದ್ದರು. | |||